ಮಡಿಕೇರಿ ಜ.3 : ಕೊಡಗು ಜಿಲ್ಲೆಯ ವಿವಿಧ ಗ್ರಾಮಗಳನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಸಮಗ್ರ ವರದಿ ಸಂಗ್ರಹಿಸುವ ಉದ್ದೇಶದಿಂದ “ಆಮ್ ಆದ್ಮಿ ಪಾರ್ಟಿ ನಡೆ ಹಳ್ಳಿಯ ಕಡೆ” ಎಂಬ ಗ್ರಾಮ ಸಂಪರ್ಕ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲೆಯ ಆಯ್ದ ಗ್ರಾಮಗಳಿಗೆ ಪಕ್ಷದ ಪ್ರಮುಖರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮುಕ್ತ ಸಮಾಲೋಚನೆ ನಡೆಸಲಿದ್ದಾರೆ. ಅಂತಿಮವಾಗಿ ಸಂಗ್ರಹಿಸಿದ ಸಮಸ್ಯೆಗಳ ವಿವರವನ್ನು ಅವಲೋಕಿಸಿ ಮುಂಬರುವ ಲೋಕಸಭೆ, ಜಿ.ಪಂ ಮತ್ತು ತಾ.ಪಂ ಚುನಾವಣೆಗೆ ತಯಾರಿ ನಡೆಸಲಾಗುವುದು ಎಂದು ಹೇಳಿದ್ದಾರೆ.
ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಗ್ರಾಮ ಸಂಪರ್ಕ ಕಾರ್ಯಕ್ರಮದ ಮೂಲಕ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಾಗುವುದು. ಕೊಡಗಿನ ಜನಸಾಮಾನ್ಯರ ಧ್ವನಿಯಾಗಿ ಆಮ್ ಆದ್ಮಿ ಪಾರ್ಟಿ ಕಾರ್ಯ ನಿರ್ವಹಿಸಲಿದ್ದು, ಗ್ರಾಮ ಭೇಟಿ ಸಂದರ್ಭ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಎಂದು ಭೋಜಣ್ಣ ಸೋಮಯ್ಯ ಮನವಿ ಮಾಡಿದ್ದಾರೆ.









