ಮಡಿಕೇರಿ ಜ.3 : ಕಾಡಾನೆ ದಾಳಿ ಮಾಡಿದ ಪರಿಣಾಮ ಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪ ಘಟ್ಟದಳ್ಳದಲ್ಲಿ ನಡೆದಿದೆ.
ಪಿ.ಜೆ.ಪಲ್ಲವಿ ಎಂಬುವವರೇ ಗಾಯಗೊಂಡಿರುವ ಮಹಿಳೆಯಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರ್ಮಿಕರು ತೋಟದ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭ ಕಾಡಾನೆ ಏಕಾಏಕಿ ದಾಳಿ ಮಾಡಿದೆ.
ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಸೂಚಿಸುವಂತೆ ಗ್ರಾಮಸ್ಥರು ಹಾಗೂ ಕಾರ್ಮಿಕರು ಒತ್ತಾಯಿಸಿದರು.
::: ಶಾಸಕರ ಭೇಟಿ :::
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಆಸ್ಪತ್ರೆಗೆ ತೆರಳಿ ಕಾಡಾನೆ ದಾಳಿ ಕುರಿತು ಮಾಹಿತಿ ಪಡೆದರು. ಗಾಯಾಳು ಪಲ್ಲವಿ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಮಹಿಳೆಯ ಆರೋಗ್ಯ ಸ್ಥಿತಿ ಸಹಜವಾಗಿದೆ. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ತಜ್ಞರ ಸಲಹೆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ದಾಳಿ ಮಾಡಿದ ಒಂಟಿಸಲಗ ಈ ಪ್ರದೇಶಕ್ಕೆ ಹೊಸದು ಎಂದು ಅರಣ್ಯ ಇಲಾಖೆ ಅಂದಾಜಿಸಿದೆ ಎಂದರು.
ಈ ಹಿಂದಿನ ಸರಕಾರ ವನ್ಯಜೀವಿ ಹಾವಳಿ ತಡೆ ಯೋಜನೆ ಕಾರ್ಯಗತದಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಶಾಸಕರು, ನಮ್ಮ ಸರಕಾರ ರೈಲ್ವೆ ಬ್ಯಾರಿಕೇಡ್ ನಿರ್ಮಾಣ, ಆನೆ ಓಡಿಸುವ ಕಾರ್ಯಾಚರಣೆ ಕೈಗೊಂಡ ಹಿನ್ನೆಲೆ ಕಳೆದ ನಾಲ್ಕು ತಿಂಗಳಿನಿಂದ ಉಪಟಳ ಹಾಗೂ ದಾಳಿ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನವನ್ನು ವನ್ಯಜೀವಿ ಹಾವಳಿ ತಡೆಗೆ ಸರಕಾರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಕೆಪಿಸಿಸಿ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ, ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ಮತ್ತಿತರರು ಹಾಜರಿದ್ದರು.









