ಸೋಮವಾರಪೇಟೆ ಜ.7 : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಇವರ ಆಶ್ರಯದಲ್ಲಿ ಪಟ್ಟಣದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದಲ್ಲಿ ಭಾನುವಾರ ನಡೆದ 17 ವರ್ಷ ವಯೋಮಿತಿಯ ಬಾಲಕಿಯರ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯ ಸೆಮಿ ಫೈನಲ್‌ನಲ್ಲಿ ಜಯಗಳಿಸಿ ಜಾರ್ಖಂಡ್ ಮತ್ತು ಚಂಡೀಗಡ ತಂಡಗಳು ಫೈನಲ್ ತಲುಪಿವೆ.
ಜಾರ್ಖಂಡ್ ತಂಡವು ಮಧ್ಯಪ್ರದೇಶ ವಿರುದ್ಧ 7-0 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಜಾರ್ಖಂಡ್ ತಂಡದ ರೋಷನಿ ಮತ್ತು ಸುಶ್ಮಿತಾ ಲಾಕ್ರಾ ತಲಾ ಎರಡು ಗೋಲು ಗಳಿಸಿದರೆ, ಅನುಪ್ರಿಯ, ಜಮುನಾ, ಲಿಯೋನಿ ಹೆಮ್ರಾಮ್ ತಲಾ ಒಂದು ಗೋಲು ಗಳಿಸಿದರು. ಜಾರ್ಖಂಡ್ ತಂಡವು 6 ಫೀಲ್ಡ್ ಗೋಲುಗಳನ್ನು ಮತ್ತು ಪೆನಾಲ್ಟಿ ಕಾರ್ನರ್ ಮೂಲಕ ಒಂದು ಗೋಲು ದಾಖಲಿಸಿತು.
ದಿನದ ಎರಡನೇ ಸೆಮಿಫೈನಲ್ ಪಂದ್ಯ ಚಂಡೀಗಡ ಮತ್ತು ಮಣಿಪುರ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಸಮಬಲದ ಹೋರಾಟ ಕಂಡುಬಂದರೂ ಚಂಡೀಗಡ ತಂಡ ಮಣಿಪುರ ತಂಡವನ್ನು 4-2 ಗೋಲುಗಳಿಂದ ಮಣಿಸಿತು. ಮಣಿಪುರ ತಂಡಕ್ಕೆ 8 ಪೆನಾಲ್ಟಿ ಕಾರ್ನರ್ ಅವಕಾಶ ದೊರೆತರೂ ಒಂದನ್ನೂ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಚಂಡೀಗಡ ತಂಡದ ಪ್ರತಿಭಾವಂತ ಮುನ್ನಡೆ ಆಟಗಾರ್ತಿ ತಮನ್ನಾ 4 ಗೋಲು ದಾಖಲಿಸಿದರು. ಮಣಿಪುರ ತಂಡದ ಲೈಸ್ರಮ್ ಕರ್ವಾ ಹಾಗೂ ಹೈಡ್ರೋವ್ ತಲಾ ಒಂದೊಂದು ಫೀಲ್ಡ್ ಗೋಲು ದಾಖಲಿಸಿದರು.
::: ಸೋಮವಾರದ ಪಂದ್ಯಗಳು :::
ಬೆಳಿಗ್ಗೆ 10 ಗಂಟೆಗೆ ಮಣಿಪುರ ಮತ್ತು ಮಧ್ಯಪ್ರದೇಶ ತಂಡಗಳ ನಡುವೆ ಮೂರನೇ ಸ್ಥಾನಕ್ಕೆ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 3ಕ್ಕೆ ಜಾರ್ಖಂಡ್ ಮತ್ತು ಚಂಡಿಗಡ ತಂಡದ ನಡುವೆ ಅಂತಿಮ ಪಂದ್ಯಾಟ ನಡೆಯಲಿದೆ.











