ಮಡಿಕೇರಿ ಜ.8 : ಭಾರತೀಯ ಅಂಚೆ ಇಲಾಖೆಯ ವತಿಯಿಂದ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂಚೆ ಚೀಟಿಗಳ ಹಬ್ಬ ಕಾರ್ಯಕ್ರಮದಲ್ಲಿ ಕರ್ನಾಟಕದ ಮೊದಲ ಮಹಿಳಾ ಉದ್ಯಮಿ ಕಾಫಿಪುಡಿ ಸಾಕಮ್ಮ ಅವರ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಯಿತು.
ಸಾಕಮ್ಮನವರ ಕುಟುಂಬಸ್ಥರಾದ ತಾರ ಮಂಜು ಗೌಡ, ಅರಕಲಗೂಡು ಶಾಸಕ ಎ.ಮಂಜು, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಪತ್ನಿ ದಿವ್ಯ ಮಂತರ್, ಉಪಾಸಿ ಮಾಜಿ ಅಧ್ಯಕ್ಷ ವಿನೋದ್ ಶಿವಪ್ಪ, ಬೆಳೆಗಾರ ಹಾಗೂ ಉದ್ಯಮಿ ಆನಂದ ಬಸಪ್ಪ ಅವರುಗಳು ಪೋಸ್ಟಲ್ ಕವರ್ ಅನ್ನು ಅನಾವರಣಗೊಳಿಸಿದರು.
ಸುಮಂಗಲಿ ಸೇವಾ ಆಶ್ರಮದ ಸ್ವಯಂ ಸೇವಕಿ ಡಾ.ಸುಶೀಲಮ್ಮ, ಖ್ಯಾತ ಕಲಾವಿದೆ ರಾಧಾ ಮಲ್ಲಪ್ಪ, ಭಾರತೀಯ ಅಂಚೆ ಇಲಾಖೆ ನಿರ್ದೇಶಕಿ ಪ್ರೀತಿ ಅಗ್ರವಾಲ್ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರ ಉಪಸ್ಥಿತಿಯಲ್ಲಿ ಸಂಜೆ ಸಮಾರೋಪ ಸಮಾರಂಭ ನಡೆಯಿತು.
ಮಹಿಳಾ ಸಬಲೀಕರಣ’ ಎಂಬ ವಿಷಯದಡಿಯಲ್ಲಿ ರಾಜ್ಯ ಅಂಚೆಚೀಟಿಗಳ ಸಂಗ್ರಹಣೆ ಮತ್ತು ಪ್ರದರ್ಶನದ ಹಬ್ಬದಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಕರ್ನಾಟಕದ ಕಾಫಿಗೆ ಅಪಾರ ಮೌಲ್ಯವನ್ನು ತಂದ ಮಹಿಳಾ ಉದ್ಯಮಿ ಸಾಕಮ್ಮ ಅವರ ಸ್ಮರಣಾರ್ಥ ಈ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಲಾಗಿದೆ.
::: ಹೆಮ್ಮೆಯ ಮಹಿಳಾ ಉದ್ಯಮಿ :::
ಕಾಫಿಪುಡಿ ಸಾಕಮ್ಮ ಎಂದೇ ಖ್ಯಾತರಾಗಿರುವ ಸಾಕಮ್ಮ ಅವರು ಕೊಡಗು ಜಿಲ್ಲೆಯ ಸೋಮವಾರಪೇಟೆಯ “ಸಾಕಮ್ಮ”ಸ್ ಕಾಫಿ ಅಂಗಡಿಯ ಹೆಮ್ಮೆಯ ಮಾಲೀಕರಾಗಿದ್ದಾರೆ. ಕೊಡಗಿನ ವಾಣಿಜ್ಯ ಬೆಳೆ ಕಾಫಿಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
1920 ರಲ್ಲಿ ಅವರು ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿ ಕಾಫಿ ಕ್ಯೂರಿಂಗ್ ಘಟಕವನ್ನು ಸ್ಥಾಪಿಸಿದರು ಮತ್ತು ಬೆಂಗಳೂರಿಗೆ ಕಾಫಿಯ ರುಚಿಯನ್ನು ಪಸರಿಸುವಲ್ಲಿ ದೊಡ್ಡ ಕೊಡುಗೆಯನ್ನು ನೀಡಿದರು. ಸಾಕಮ್ಮ ಅವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಪ್ರದೇಶವನ್ನು ಈಗ ಸಾಕಮ್ಮ ಗಾರ್ಡನ್ ಎಂದು ಗುರುತಿಸಲಾಗಿದೆ.










