ಮಡಿಕೇರಿ ಜ.8 : ಪಾಲೂರು ಗ್ರಾಮದ ವಾರ್ಷಿಕ ಊರೊರ್ಮೆ ಸಮಾರಂಭ ಸಂಭ್ರಮದಿಂದ ಜರುಗಿತು.
‘ಪಾಲೂರ್ ಕೊಡವಾಮೆ ಕೂಟ’ ವತಿಯಿಂದ ನಡೆದ 18ನೇ ವರ್ಷದ ಕಾರ್ಯಕ್ರಮದಲ್ಲಿ ಪಾಲೂರಿನಲ್ಲಿ ನೆಲೆಸಿರುವ ಮಂದನೆರವಂಡ, ನೆರವಂಡ, ಚೆರುವಾಳಂಡ, ಮೇಪಾಡಂಡ, ಪೊದುವಾಡ, ಪೈಕೇರ, ಬೊಳ್ಳಿಯಂಡ, ಬಲ್ಲಂಡ ಕುಟುಂಬಗಳ ಸದಸ್ಯರು ಪಾಲ್ಗೊಂಡಿದ್ದರು.
ಮೇಪಾಡಂಡ ವೇಣು ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ “ಕೊಡವರ ಆಚಾರ, ವಿಚಾರ ಹಾಗೂ ಕಲೆ ಬಹಳ ವಿಶಿಷ್ಟವಾದದ್ದು. ಯುವಜನತೆ ನಮ್ಮ ಸಂಸ್ಕೃತಿಯನ್ನ ಕಾಪಾಡಲು ಒಗ್ಗಟ್ಟಿನಿಂದ ಆಸಕ್ತಿ ತೋರಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಮದ ಹಿರಿಯ ಕಾಫಿ ಬೆಳೆಗಾರರಾದ ನೆರವಂಡ ಎಂ.ಹರೀಶ್ ಅವರನ್ನ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡವಾಮೆ ಕೂಟದ ವತಿಯಿಂದ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಗ್ರಾಮಸ್ಥರಿಗೆ ಹಲವು ಮನೋರಂಜನಾ ಸ್ಪರ್ಧೆ (ಕಳಿಕೂಟ) ಹಾಗೂ ವಾಲಗ ನೃತ್ಯ ಸ್ಪರ್ಧೆಗಳು ನಡೆಯಿತು.
ಸಮಾರಂಭದಲ್ಲಿ ಪಾಲೂರು ಗ್ರಾಮದವರಾದ ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಪಾಲೂರ್ ಕೊಡವಾಮೆ ಕೂಟದ ಆಡಳಿತ ಮಂಡಳಿಯ ಉಪಾಧ್ಯಕ್ಷ ಪೊದುವಾಡ ಜಯ ಪೊನ್ನಪ್ಪ, ಉಪಾಧ್ಯಕ್ಷೆ ನೆರವಂಡ ಚೆಸ್ಲಿ ದೇವಯ್ಯ, ಕಾರ್ಯದರ್ಶಿ ಮಂದನೆರವಂಡ ಸಂಜು ಅಚ್ಚಯ್ಯ, ಸದಸ್ಯರಾದ ಪೈಕೇರ ನಂದ ಉತ್ತಪ್ಪ, ಚೆರುವಾಳಂಡ ದಿವಿಜ ಬೊಳ್ಳಮ್ಮ, ನೆರವಂಡ ಶ್ವೇತಾ ದೇವಯ್ಯ, ನೆರವಂಡ ಸಭಿ ಗಣಪತಿ, ಮಂದನೆರವಂಡ ಲೋಕೇಶ್ ಅಯ್ಯಪ್ಪ, ಮಂದನೆರವಂಡ ಬೋಪಣ್ಣ ದಿನೇಶ್, ಮೇಪಾಡಂಡ ಸುಗುಣ ಹಾಜರಿದ್ದರು.










