ಮಡಿಕೇರಿ ಜ.8 : ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ 2022-23ನೇ ಸಾಲಿನಲ್ಲಿ ರೂ. 10.00 ಕೋಟಿ ಅನುದಾನ ಮಂಜೂರಾಗಿದ್ದು, ಈ ಪೈಕಿ ರೂ.6.00 ಕೋಟಿ ಅನುದಾನ ಕೊಡವ ಸಾಂಸ್ಕೃತಿಕ ಭವನ / ಮ್ಯೂಸಿಯಂ ಇತ್ಯಾದಿ ಅಭಿವೃದ್ಧಿಗಾಗಿ ಹಾಗೂ ರೂ.4.00 ಕೋಟಿಗಳಲ್ಲಿ 31 ಕೊಡವ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಮಂಜೂರಾತಿ ನೀಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಸದರಿ ಕಾಮಗಾರಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಪ್ರಸ್ತುತ, ಈ ಕೂಡ ಲಗತ್ತಿಸಿರುವ 31 ಸ್ಥಳಗಳಲ್ಲಿ ಕೊಡವ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ಒಟ್ಟು ರೂ.4.00 ಕೋಟಿ (ನಾಲ್ಕು ನೂರು ಲಕ್ಷ ರೂಪಾಯಿಗಳು ಮಾತ್ರ)ಗಳ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದ್ದು, ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.









