ಮಡಿಕೇರಿ ಜ.8 : ರಾಜ್ಯದ ಇತರೆ ಜಿಲ್ಲೆಗಳಿಗಿಂತ ಭಿನ್ನವಾಗಿರುವ, ಘಟ್ಟ ಪ್ರದೇಶವಾಗಿರುವ ಕೊಡಗಿನಲ್ಲಿ ವಾಹನ ದಟ್ಟಣೆೆ, ನಿಲುಗಡೆಯ ಸಮಸ್ಯೆಗಳನ್ನು ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಬಗೆ ಹರಿಸಲು ಪ್ರಧಾನ ಆದ್ಯತೆ ನೀಡಲಾಗುತ್ತದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದರು.
ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ ‘ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ಜಿಲ್ಲೆಯ ಜನಸಂಖ್ಯೆ ಮತ್ತು ವಾಹನಗಳ ಸಂಚಾರಕ್ಕೆ ರಸ್ತೆ ವ್ಯವಸ್ಥೆ ಹೊಂದಿಕೊಳ್ಳುತ್ತದೆಯಾದರೂ, ಪ್ರವಾಸಿ ಋತುಗಳು ಮತ್ತು ಉತ್ಸವಗಳ ಸಂದರ್ಭ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ವಾಹನ ದಟ್ಟಣೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆಂದು ಅಭಿಪ್ರಾಯಿಸಿದರು.
ವಾಹನ ದಟ್ಟಣೆÉ, ನಿಲುಗಡೆ ಸಮಸ್ಯೆಗಳನ್ನು ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ ಬಗೆಹರಿಸಲು ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲು ಪೊಲೀಸ್ ಇಲಾಖೆ ಸದಾ ಮುಕ್ತವಾಗಿದೆಯೆಂದು ತಿಳಿಸಿ, ಪ್ರವಾಸಿ ತಾಣ ರಾಜಾಸೀಟ್‌ನಲ್ಲಿ ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆಗಳಿಲ್ಲ. ಇದನ್ನು ಪರಿಹರಿಸುವ ಪರ್ಯಾಯ ಮಾರ್ಗಗಳತ್ತ ಎಲ್ಲರ ಸಹಕಾರದೊಂದಿಗೆ ಪ್ರಯತ್ನಿಸುವ ಭರವಸೆಯನ್ನಿತ್ತರು.
ತಮ್ಮ ಕಳೆದ ಒಂದು ವರ್ಷದ ಅವಧಿಯಲ್ಲಿ ಎದುರಿಸಿದ ಸವಾಲುಗಳಲ್ಲಿ ವಾಹನ ನಿಯಮತ್ರಣ ಸಮಸ್ಯೆಯೊಂದಿಗೆ ಮಾದಕ ವಸ್ತುಗಳ ಮಾರಾರ ದಂಧೆಯ ನಿಯಂತ್ರಣವೂ ಒಂದಾಗಿದೆ. ಪೊಲೀಸ್ ಇಲಾಖೆ ಮಾದಕ ವಸ್ತುಗಳ ಅಕ್ರಮ ಮಾರಾಟ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಪ್ರಕರಣಗಳನ್ನು ದಾಖಲಿಸುತ್ತಿದೆ. ಆದರೆ, ಕಾನೂನಿನ ಅನ್ವಯ ಪ್ರಕರಣದ ಆರೋಪಿಗಳು ತಕ್ಷಣವೇ ಹೊರಬರುವ ಪ್ರಸಂಗಗಳು ನಡೆಯುತ್ತವಾದರು, ಇಲಾಖೆ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆಯೆಂದು ತಿಳಿಸಿದರು.
ಮದ್ಯ ಸೇವನೆಯಿಂದ ಕುತ್ತು- ಜಿಲ್ಲಾ ವ್ಯಾಪ್ತಿಯಲ್ಲಿ ಇತರೆ ಜಿಲ್ಲೆಗಳಲ್ಲಿ ಕಂಡು ಬರುವ ರಾಜಕೀಯ ಕಾರಣಗಳಿಂದ ಮತ್ತು ಉದ್ದೇಶಪೂರ್ವಕವಾಗಿ ಷಡ್ಯಂತ್ರ ನಡೆಸಿ ನಡೆಸುವ ಹತ್ಯಾ ಪ್ರಕರಣಗಳು ನಡೆಯುತ್ತಿಲ್ಲ. ಇದಕ್ಕೆ ಬದಲಾಗಿ ಕುಟುಂಬಸ್ಥರ ನಡುವಿನ ಕಲಹಗಳಿಂದ ಅದರಲ್ಲೂ ನಿಶಾಸೇವನೆಯಿಂದ ನಡೆಯುವ ಹತ್ಯಾಪ್ರಕರಣಗಳೆ ಅಧಿಕ. ಈ ಹಿನ್ನೆಲೆ ಅನಧಿಕೃತ ಮದ್ಯ ಮಾರಾಟ ಪ್ರಕರಣಗಳ ಮೇಲೆ ಕ್ರಮ ಜರುಗಿಸಲು ಅಬಕಾರಿ ಇಲಾಖೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಒತ್ತಡ ಹಾಕುವುದಾಗಿ ರಾಮರಾಜನ್ ತಿಳಿಸಿದರು.
ದುಷ್ಕೃತ್ಯ ತಡೆಗೆ ಕಾನೂನಿನ ಭಯ ಅವಶ್ಯ- ಸಮಾಜದಲ್ಲಿ ದುಷ್ಕೃತ್ಯಗಳನ್ನು ಪರಿಣಾಮಕಾರಿಯಾಗಿ ತಡೆಯಲು ‘ಪೊಲೀಸ್’ ಭಯದ ಅಗತ್ಯವಿಲ್ಲ. ಬದಲಾಗಿ, ‘ಕಾನೂನು’ ಭಯ ಮೂಡುವುದು ಅತ್ಯವಶ್ಯವೆಂದು ದೃಢವಾಗಿ ನುಡಿದರು.
ಪ್ರತಿಯೊಬ್ಬರಲ್ಲೂ ಕಾನೂನಿನ ಬಗ್ಗೆ ಗೌರವ ಮತ್ತು ಭಯ ಮೂಡುವುದಕ್ಕೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥ ಮತ್ತು ಆಯಾ ಪ್ರಕರಣದಲ್ಲಿ ಆಗಿರುವ ಶಿಕ್ಷೆಯ ಪ್ರಮಾಣ ಹೆಚ್ಚಿನ ಪರಿಣಾಮ ಬೀರುತ್ತದೆಂದು ಅಭಿಪ್ರಾಯಿಸಿ, ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ದಾಖಲಿಸಿದ ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆಯೆಂದು ಅವರು ಮಾಹಿತಿಯನ್ನಿತ್ತರು.
ಕಾರ್ಮಿಕರ ಬಗ್ಗೆ ಬೆಳೆಗಾರರ ನಿಗಾ ಅವಶ್ಯ- ಕೊಡಗಿನಲ್ಲಿ ಕಾಫಿ ಕೊಯ್ಲಿನ ಹಂತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಕಾರ್ಮಿಕರು ಆಗಮಿಸುತ್ತಾರೆ. ಆದರೆ, ಇವರೆಲ್ಲರನ್ನು ಪರಿಶೀಲಿಸಲು ಪೊಲೀಸರಿಗೆ ಅಸಾಧ್ಯ. ಈ ಹಿನ್ನೆಲೆ ತಮ್ಮ ತೋಟಗಳಲ್ಲಿ ಕೆಲಸ ನಿರ್ವಹಿಸಲು ಬರುವ ಕಾರ್ಮಿಕರ ಆಧಾರ್, ಪ್ಯಾನ್ ಕಾರ್ಡ್ಗಳ ಮಾಹಿತಿಯನ್ನು, ಅವರ ಸಮಬಂಧಿಗಳ ಮಾಹಿತಿ, ಅವರ ಭಾವಚಿತ್ರವನ್ನು ಪಡೆದುಕೊಳ್ಳುವ ಕನಿಷ್ಟ ಜವಾಬ್ದಾರಿ ಬೆಳೆಗಾರರದ್ದಾಗಿರುತ್ತದೆ. ಯಾವುದೇ ಕಾರ್ಮಿಕರ ಬಗ್ಗೆ ಸಂಶಯಗಳು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸುವಂತಾಗಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ನಕಲಿ ದಾಖಲೆಗಳೊಂದಿಗೆ ಬಾಂಗ್ಲಾವಲಸಿಗ ಕಾರ್ಮಿಕರು ಆಗಮಿಸುತ್ತಾರೆ ಎನ್ನುವ ಆರೋಪಗಳ ಬಗ್ಗೆ ಗಮನ ಸೆಳೆದಾಗ, ಎಸ್‌ಪಿ ರಾಮರಾಜನ್ ಅವರು , ಇಂತಹ ಯಾವುದೇ ಪ್ರಕರಣಗಳ ಬಗ್ಗೆ ಸಂಶಯಗಳಿದ್ದಲ್ಲಿ ಪೊಲೀಸರಿಗೆ ಮಾಹಿತಿಯನ್ನು ನೀಡುವುದರೊಂದಿಗೆ, ಬೆಳೆಗಾರರು ಜಾಗೃತರಾಗಬೇಕೆಂದು ಹೇಳಿದರು.
ಅಕ್ರಮ ಹೋಂ ಸ್ಟೇ- ಜಿಲ್ಲಾ ವ್ಯಾಪ್ತಿಯಲ್ಲಿರುವ ಅಕ್ರಮ ಹೋಂ ಸ್ಟೇಗಳು ಮತ್ತು ಅವುಗಳಲ್ಲಿ ವಾಸ್ತವ್ಯಕ್ಕೆ ಬಂದ ಪ್ರವಾಸಿಗರಿಂದ ಸಾರ್ವಜನಿಕರಿಗೆ ಉಂಟಾಗುವ ಸಂಷಕ್ಟಗಳ ಬಗ್ಗೆ ಕೇಳಿದ ಪ್ರಶ್ನೆಗೆ ರಾಮರಾಜನ್ ಅವರು, ಹೋಂಸ್ಟೇ ಎನ್ನುವ ಕಲ್ಪನೆ ಬಂದಿರುವುದು ಇತ್ತೀಚಿನ ಎರಡು ದಶಕಗಳಂದೀಚೆಗಷ್ಟೆ. ಅಕ್ರಮ ಹೋಂ ಸ್ಟೇ ಎಂದು ಪೊಲೀಸರು ಅವುಗಳ ಪರಿಶೀಲನೆಗೆಂದು ಮುಂದಾದಲ್ಲಿ ಒಟ್ಟಾಗಿ ಆ ಉದ್ಯಮಕ್ಕೆ ಹೊಡೆತ ಬೀಳುತ್ತದೆ. ಈ ಹಿನ್ನೆಲೆ ಅಕ್ರಮ ಹೋಂ ಸ್ಟೇಗಳಿಂದ ಸಾರ್ವಜನಿಕರಿಗೆ ತೊಂದರೆಯಾದಾಗ ದೂರವಾಣ ‘112’ ಕ್ಕೆ ಕರೆ ಮಾಡಿದಲ್ಲಿ, ಆ ಸಂದರ್ಭ ಪೊಲೀಸರು ಅಲ್ಲಿಗಾಗಮಿಸಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಮಾಧ್ಯಮಗಳ ಪಾತ್ರವೂ ಹಿರಿದೆಂದು ಸ್ಪಷ್ಟಪಡಿಸಿದರು.
ಕೊಡಗಿನಲ್ಲಿ ‘ ಲಾಠಿ’ ಬಳಕೆ ಬೇಕಾಗಿಲ್ಲ…
ಕೊಡಗು ಜಿಲ್ಲೆಯ ಜನರ ಶಿಕ್ಷಣ ಮಟ್ಟ ಹೆಚ್ಚಾಗಿದ್ದು, ಯಾವುದೇ ಪ್ರಕರಣಗಳು ಪೊಲೀಸ್ ಮೆಟ್ಟಿಲೇರಿದಾಗ, ಅದರ ಬಗೆ ಹರಿಕೆಗೆ ಮಾರ್ಗೋಪಾಯಗಳನ್ನು ಸೂಚಿದಾಗ ಅದನ್ನು ಅರಿತುಕೊಳ್ಳುತ್ತಾರೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ‘ಲಾಠಿ’ ಪ್ರಯೋಗದ ಅಗತ್ಯತೆ ಇಲ್ಲವೆಂದು ತಿಳಿಸಿ, ಅದೇ ಕೆಲ ಜಿಲ್ಲೆಗಳಲ್ಲಿ ಅಂತಹ ಪರಿಸ್ಥಿತಿಗಳಿಲ್ಲ. ಅಲ್ಲಿ ಲಾಠಿ ಇದ್ದಾಗಲೆ ಒಂದಷ್ಟು ಸಮಸ್ಯೆಗಳು ಬಗೆಹರಿಯುತ್ತದೆಂದು ಹಾಸ್ಯದ ಧಾಟಿಯಲ್ಲಿ ನುಡಿದರು.
ಸನ್ಮಾನ- ಇದೇ ಸಂದರ್ಭ ಕೊಡಗು ಪತ್ರಕರ್ತರ ಸಂಘದಿಂದ ಜಿಲ್ಲಾ ಪೊಲಿಸ್ ವರಿಷ್ಠಾಧಿಖಾರಿ ಕೆ. ರಾಮರಾಜನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ವಹಿಸಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿ, ಸಲಹೆಗಾರರಾದ ಅನಿಲ್ ಎಚ್.ಟಿ. ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಜಿ.ವಿ. ರವಿ ವಂದಿಸಿದರು.










