ನಾಪೋಕ್ಲು ಜ.11 : ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರ್.ಟಿ.ಐ. ಕಾರ್ಯಕರ್ತನೆಂಬ ಸೋಗು ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿಯನ್ನು ಗಾಡಿಪಾರು ಮಾಡಬೇಕೆಂದು ಒತ್ತಾಯಿಸಿ ನಾಪೋಕ್ಲುವಿನಲ್ಲಿ ಪ್ರತಿಭಟನೆ ನಡೆಯಿತು.
ನಾಪೋಕ್ಲು ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆ.ಎ.ಹ್ಯಾರಿಸ್ ಎಂಬತನ ವಿರುದ್ಧ ಘೋಷಣೆಗಳನ್ನು ಕೂಗಿ, ಕೂಡಲೇ ಈತನನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಕೆ.ಎ.ಹ್ಯಾರಿಸ್ ಎಂಬಾತ ಆರ್.ಟಿ.ಐ. ಕಾರ್ಯಕರ್ತನೆಂದು ಹೇಳಿಕೊಂಡು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಅಧಿಕಾರಿಗಳಿಗೆ, ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳಿಗೆ ಮಾನಸಿಕ ಕಿರುಕುಳ ನೀಡುತ್ತಾ ಕರ್ತವ್ಯಕ್ಕೆ ಅಡ್ಡಿಪಡಿಸಿ ಬ್ಲ್ಯಾಕ್ ಮೇಲ್ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹಾಗೂ ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ ಮಾತನಾಡಿ, ಆರ್.ಟಿ.ಐ. ಕಾರ್ಯಕರ್ತನೆಂದ ಮೇಲೆ ಸಾರ್ವಜನಿಕ ಸೇವೆಯಲ್ಲಿ ಸ್ವಲ್ಪ ಒಳ್ಳೆಯ ಕೆಲಸವನ್ನು ಮಾಡಬೇಕು. ಆದರೆ ಆತನ ವಿರುದ್ದ ತುಂಬಾ ದೂರುಗಳು ಕೇಳಿ ಬರುತ್ತಿವೆ. ಆಸ್ಪತ್ರೆಗೆ ಹೋಗಿ ವೈದ್ಯರು ಗಳಿಗೆ ಕಿರುಕುಳು ಕೊಟ್ಟು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಹೀಗಾಗಿ ವೈದ್ಯರು ಆಸ್ಪತ್ರೆಗೆ ಬರಲು ಹೆದರುತ್ತಿದ್ದಾರೆ. ಆದ್ದರಿಂದ ಹಾರೀಸ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪೂವಯ್ಯ ಮಾತನಾಡಿ ಆರ್.ಟಿ.ಐ. ಕಾರ್ಯಕರ್ತನೆಂದು ಪದೇ ಪದೇ ವೈದ್ಯರುಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಡಾ. ಜೀವನ್ ಮತ್ತು ದಂತ ವೈದ್ಯರ ಮೇಲೆ ಅನಾವಶ್ಯಕ ದೂರು ಸಲ್ಲಿಸುವುದು ಮೂಗರ್ಜಿ ಬರೆಯುವುದು, ದೂರವಾಣಿ ಮುಖಾಂತರ ಸುಳ್ಳು ಪುಕಾರು ನೀಡುತ್ತಿದ್ದಾರೆ. ಇತ್ತೀಚೆಗೆ ಡಾ. ಜೀವನ್ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ದೂರು ದಾಖಲಾದಾಗ ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಕ್ಷಮೆ ಕೇಳಿ ಕ್ಷಮಾಪಣಾ ಪತ್ರವನ್ನು ಬರೆದುಕೊಟ್ಟಿದ್ದಾರೆ. ಆದರೂ ಸಹ ಅವರಲ್ಲಿ ಯಾವುದೇ ಸುಧಾರಣೆ ಕಾಣಿಸುತ್ತಿಲ್ಲ. ಪದೇ ಪದೇ ಆಸ್ಪತ್ರೆಗೆ ಬಂದು ಸಿಬ್ಬಂದಿಗಳಿಗೆ ಬೈಯ್ಯುವುದು, ಆಸ್ಪತ್ರೆಯ ಭಾವಚಿತ್ರಗಳನ್ನು ತೆಗೆಯುವುದು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯತಿ ಸದಸ್ಯ ಬಿ.ಎಂ ಪ್ರತೀಪ ಮಾತನಾಡಿ, ಈತನ ವಿರುದ್ಧ ಸೂಕ್ತ ಕಠಿಣ ಕ್ರಮಕೈಗೊಳ್ಳಬೇಕು. ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು, ಇಲ್ಲವಾದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಳಿಯ0ಡ ಅಂಬಿಕಾ ಕಾರ್ಯಪ್ಪ, ಜೆಡಿಎಸ್ ಪಕ್ಷದ ಪ್ರಮುಖ ಎಂ.ಎ ಮನ್ಸೂರು ಆಲಿ, ಗ್ರಾ.ಪಂ ಸದಸ್ಯ ಮಾಚೇಟ್ಟಿರ ಕುಶು ಕುಶಾಲಪ್ಪ, ಎಂ.ಐ.ಮಹಮ್ಮದ್ ಕುರೇಶಿ , ಟಿ.ಎ.ಮಹಮ್ಮದ್, ವಿಎಸ್ಎಸ್ಎನ್ ನಿರ್ದೇಶಕ ಅರೆಯಡ ರತ್ನ ಪೆಮ್ಮಯ್ಯ, ಶಿವಾಜಿ ಕ್ಲಬ್ ಅಧ್ಯಕ್ಷ ಕೆಲೇಟಿರ ದೀಪು ದೇವಯ್ಯ, ಪಟ್ಟಣ ಮಸೀದಿ ಜಮಾಯತ್ ಮಾಜಿ ಕಾರ್ಯದರ್ಶಿ ಟಿ.ಎ.ಅಹಮದ್, ಕೊಂಡಿರ ಗಣಪತಿ, ಚೋಕಿರ ಸುಧೀಶ್ , ಎಂ.ಎ.ಆಸಿಫ್, ಪಿ.ಎಂ.ರಶೀದ್, ಮಿಶ್ರದ್ ಪರವಂಡ, ಪಿ.ಎಂ.ಅಬ್ದುಲ್ ಅಜೀಜ್ , ಪಿ.ಎಂಬದ್ರುದ್ದೀನ್ , ಎಂ.ಎಸ್.ಇಬ್ರಾಹಿಂ , ಎಂ.ಬಿ.ಅಶ್ರಫ್ ಅಲಿ, ಮೆಹಮುದ್, ಪಿ .ಎಸ್.ರಫೀಕ್ ಸೇರದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಹಾಗೂ ಇನ್ನಿತರ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸಾರ್ವಜನಿಕರಿಂದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಠಾಣಾಧಿಕಾರಿ ಮಂಜುನಾಥ್ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ವರದಿ : ದುಗ್ಗಳ ಸದಾನಂದ