ಮಡಿಕೇರಿ ಜ.12 : ಪ್ರಕೃತಿಯ ಆರಾಧಕರಾಗಿ ‘ಭೂಮಿ ಪುತ್ರ’ರೆಂದೇ ಕರೆಸಿಕೊಂಡಿರುವ ಮೊಗೇರ ಸಮಾಜದ ಪೌರಾಣಿಕ ಹಿನ್ನೆಲೆ, ದೈವಗಳ ಮಹತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನ ‘ಬ್ರಹ್ಮ ಮೊಗೇರರ್’ ತುಳು ಯಕ್ಷಗಾನ ಬಯಲಾಟ ಫೆ.22 ರಂದು ಮದೆನಾಡಿನಲ್ಲಿ ಆಯೋಜಿಸಲಾಗಿದೆಯೆಂದು ಕೊಡಗು ಜಿಲ್ಲಾ ಮೊಗೇರ ಸಮಾಜದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸಲಹೆಗಾರ ಪಿ.ಎಂ.ರವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನಲ್ಲಿ ಬನಗಳನ್ನು ಸ್ಥಾಪಿಸಿ ದೈವಗಳ ಹೆಸರಿನಲ್ಲಿ ಪ್ರಕೃತಿಯನ್ನು ಪೂಜಿಸಿಕೊಂಡು ಬಂದಂತಹ ಸಮೂಹ ಮೊಗೇರ ಸಮಾಜದ್ದು. ಮೊಗೇರ ಕುಲದಲ್ಲಿ ಹುಟ್ಟಿ ನಾಡಿನ ಹಿತರಕ್ಷಣೆಗಾಗಿ ಪರಾಕ್ರಮ ಮೆರೆದು ಹುತಾತ್ಮರಾದ ಮುದ್ದ ಕಳಲ, ಕಾರ್ನಿಯ ಕಳಲ ಮತ್ತು ತನ್ನಿಮಾನಿಗ ಅವರು ದೈವಾಂಶ ಸಂಭೂತರಾಗಿ ಇಂದಿಗೂ ಪೂಜಿಸಲ್ಪಡುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಯಕ್ಷಗಾನದ ಮೂಲಕ ತಿಳಿಯ ಪಡಿಸುವುದು ತಮ್ಮ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ತುಳುನಾಡಿನ ಮೊಗೇರ ಜನಾಂಗದ ಕುಲದೈವ ಮೂವೆರ್ ಮುಗೆರ್ಲು ತನ್ನಿಮಾನಿಗರ ಹುಟ್ಟು, ಬಾಲ್ಯ, ಪರಾಕ್ರಮದ ಬದುಕು ಮತ್ತು ಅಂತ್ಯದ ಬಗ್ಗೆ ಇರುವ ಪೌರಾಣಿಕ ಹಿನ್ನೆಲೆಯನ್ನು ಆಧರಿಸಿ ‘ಬ್ರಹ್ಮ ಮೊಗೇರರ್’ ಯಕ್ಷಗಾನ ನಡೆಯಲಿದೆ. ಮದೆನಾಡಿನ ಬ್ರಹ್ಮ ಮೊಗೇರರ್ ಯಕ್ಷಗಾನ ಸಮಿತಿ ಯಕ್ಷಗಾನ ಸಮಿತಿಯ ಆಶ್ರಯದಲ್ಲಿ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಸಹಯೋಗದೊಂದಿಗೆ ಮದೆನಾಡಿನ ಕುಟ್ಟೆಟ್ಟಿರ ಪೂವಯ್ಯ ಅವರ ಗದ್ದೆಯಲ್ಲಿ ಯಕ್ಷಗಾನ ನಡೆಯಲಿದೆ. ಇದನ್ನು ದಕ್ಷಿಣ ಕನ್ನಡದ ಬಂಟ್ವಾಳದ ಸರಪಾಡಿಯ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ನಡೆಸಿಕೊಡಲಿದ್ದು, ಹಲ ಪ್ರಸಿದ್ಧ ಯಕ್ಷಗಾನ ಪಾತ್ರಧಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಯಕ್ಷಗಾನ ಅಂದು ರಾತ್ರಿ 9 ಗಂಟೆಗೆ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನ ಸಂಜೆಯಿಂದ ಆರಂಭಗೊಳ್ಳುವ ಸಭಾ ಕಾರ್ಯಕ್ರಮದಲ್ಲಿ ಹಲ ಗಣ್ಯರು, ಚಲನಚಿತ್ರ ನಟರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಲಿದೆಯೆಂದರು.
ಯಕ್ಷಗಾನ ಪ್ರೋತ್ಸಾಹಿಸಿ- ಕರಾವಳಿ ನಾಡಿನ ಪ್ರಸಿದ್ಧ ಕಲಾ ಪ್ರಕಾರವಾದ ಯಕ್ಷಗಾನಕ್ಕೆ ಕೊಡಗಿನಲ್ಲಿ ಹೆಚ್ಚಿನ ಅವಕಾಶ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕೆಂದು ಇದೇ ಸಂದರ್ಭ ರವಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಬಿ.ಜನಾರ್ಧನ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪಿ.ಸಿ.ರಘು, ಬ್ರಹ್ಮ ಮೊಗೇರರ್ ಯಕ್ಷಗಾನ ಸಮಿತಿಯ ಅಧ್ಯಕ್ಷ ಪಿ.ಐ.ಸತೀಶ್, ಕಾರ್ಯಾಧ್ಯಕ್ಷ ಪಿ.ಎ.ಚಂದ್ರಾವತಿ ಹಾಗೂ ಸಂಯೋಜಕ ಪಿ.ಎಂ.ಸುಂದರ ಉಪಸ್ಥಿತರಿದ್ದರು.








