ಮಡಿಕೇರಿ ಜ.14 : ಸೋಮವಾರಪೇಟೆಯ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು.
ಪಟ್ಟಣದ ವೃತ್ತದಲ್ಲಿರುವ ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಯುವ ಶಕ್ತಿಯಿಂದ ಮಾತ್ರ ದೇಶದ ಬೆಳವಣಿಗೆ ಸಾಧ್ಯ. ಯುವ ಸಮುದಾಯದ ಮೇಲೆ ಸ್ವಾಮಿ ವಿವೇಕಾನಂದರು ಅದಮ್ಯ ವಿಶ್ವಾಸ ಇಟ್ಟಿದ್ದರು. ಇವರ ಜೀವನ ಚರಿತ್ರೆಯೇ ಯುವ ಜನಾಂಗಕ್ಕೆ ಪ್ರೇರಣೆಯಾಗಬೇಕು ಎಂದರು.
ವಿವೇಕಾನಂದರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಸಮಾಜದ ಮೇಲೆ ಅತೀವ ಕಾಳಜಿ, ಧರ್ಮ ಶ್ರದ್ಧೆಯೊಂದಿಗೆ ಭಾರತದ ಪ್ರಾಚೀನ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲಬೇಕು ಎಂದು ತಿಳಿಸಿದರು.
ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಪಿ.ಕೆ.ರವಿ, ರೋಟರಿ ಸಂಸ್ಥೆ ಅಧ್ಯಕ್ಷ ನಂಗಾರು ವಸಂತ್, ಕಾರ್ಯದರ್ಶಿ ಚೇತನ್, ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ಮಲ್ಲಪ್ಪ, ಮಾಜೀ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ವೀರಶೈವ ಸಮಾಜದ ಮೃತ್ಯುಂಜಯ ಮತ್ತಿತರರು ಉಪಸ್ಥಿತರಿದ್ದರು.










