ನಾಪೋಕ್ಲು ಜ.16 : ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಟ್ರಾನ್ಸ್ ಫಾರ್ಮರ್ ಒಂದು ದುರಸ್ತಿಗೆ ಒಳಗಾಗಿ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ನೂತನ ಟ್ರಾನ್ಸ್ ಫಾರ್ಮರ್ ಅಳವಡಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಚೇಲಾವರ ಗ್ರಾಮದ ಮನೆಯಪಂಡ ಧೀರಜ್ ತಿಮ್ಮಯ್ಯ ಅವರ ಕಾಫಿ ತೋಟದಲ್ಲಿ ಅಳವಡಿಸಲಾಗಿರುವ ಟ್ರಾನ್ಸ್ ಫಾರ್ಮರ್ ಕಳೆದ ಎರಡು ವರ್ಷಗಳಿಂದ ದುಸ್ಥಿತಿಯಲ್ಲಿದೆ. ಟ್ರಾನ್ಸ್ ಫಾರ್ಮರ್ ನಲ್ಲಿರುವ ದ್ರವರೂಪದ ವಸ್ತುಗಳು ಸೊರುತ್ತಿದ್ದು, ಇದರಿಂದಾಗಿ ಗ್ರಾಮಕ್ಕೆ ವಿದ್ಯುತ್ ಸಮಸ್ಯೆ ಎದುರಾಗಿದೆ. ಪದೇ ಪದೇ ವಿದ್ಯುತ್ ಕಡಿತಗೊಳ್ಳುವುದು, ವಿದ್ಯುತ್ ಪೂರೈಕೆಯಾದರೂ ಲೋ ವೋಲ್ಟೇಜ್ ಕೊರತೆಯಿಂದ ಸಮಸ್ಯೆ ಅನುಭವಿಸುವಂತಾಗಿದೆ ಎಂದರು.
ಮೂರ್ನಾಡಿನ ಚೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ನೂತನ ಟ್ರಾನ್ಸ್ ಫಾರ್ಮರ್ ಅಳವಡಿಸಿ ಗ್ರಾಮದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿ ಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ : ದುಗ್ಗಳ ಸದಾನಂದ