ಮಡಿಕೇರಿ ಜ.25 NEWS DESK : ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ಅಮ್ಮತ್ತಿ ಸಮೀಪದ ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಬೇಬಿ (52) ಮೃತ ದುರ್ದೈವಿ. ತೋಟದಲ್ಲಿ ಕಾಫಿ ಕೊಯ್ಲು ಕೆಲಸ ಮುಗಿಸಿಕೊಂಡು ಸಂಜೆ ಮರುಳುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿದೆ. ಇದರ ಪರಿಣಾಮ ಹೊಟ್ಟೆ ಹಾಗೂ ಸೊಂಟಕ್ಕೆ ತೀವ್ರ ಗಾಯಗಳಾಗಿ ಬೇಬಿ ಸ್ಥಳದಲ್ಲೇ ಸಾವನ್ನಪ್ಪಿದರು.
ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಕಾರ್ಮಿಕ ಮುಖಂಡ ಮಹದೇವ್ ಮಾತನಾಡಿ, ಬೆಟ್ಟಗೇರಿ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾರ್ಮಿಕರು ಕೆಲಸಕ್ಕೆ ತೆರಳಲು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು.
ಶಾಸಕ ಭೇಟಿ :: ಸ್ಥಳಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.
ಪರಿಹಾರವನ್ನು ಕೂಡಲೇ ನೀಡುವ ಬಗ್ಗೆ ಭರವಸೆ ನೀಡಿದರು. ಕಾಡಾನೆಗಳನ್ನು ಕಾಡಿಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಇದೇ ಸಂದರ್ಭ ಸೂಚನೆ ನೀಡಿದರು.












