ಮಡಿಕೇರಿ ಜ.27 : ಜಾತಿ ಪ್ರಮಾಣವನ್ನು ಸರಿಪಡಿಸಬೇಕು ಮತ್ತು ಪರಿಶಿಷ್ಟ ಜಾತಿಯವರಿಗೆ ನಿವೇಶನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.
ಮಡಿಕೇರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ್ದ ಸಂದರ್ಭ ಭೇಟಿಯಾದ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ.ಸೋಮಪ್ಪ ಅವರು, ಜಾತಿ ಪ್ರಮಾಣ ಪತ್ರ ನೀಡುವಾಗ ತಪ್ಪಾಗಿ ನಮೂದಿಸುತ್ತಿರುವ ಬಗ್ಗೆ ಗಮನ ಸೆಳೆದರು.
ಜಾತಿ ಪ್ರಮಾಣವನ್ನು ಸರಿ ಪಡಿಸಬೇಕು, ಪರಿಶಿಷ್ಟ ಜಾತಿಯವರಿಗೆ ನಿವೇಶನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೊಡಗು, ಚಿಕ್ಕಮಗಳೂರು, ಹಾಸನ, ಕಾಸರಗೋಡು, ಉಡುಪಿ, ದಕ್ಷಿಣಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಒಟ್ಟು 9 ಲಕ್ಷಕ್ಕೂ ಹೆಚ್ಚು ಆದಿದ್ರಾವಿಡ ಸಮುದಾಯದವರಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸುಮಾರು 30ಸಾವಿರ ಮಂದಿ ವಾಸವಾಗಿದ್ದಾರೆ. ಆದಿದ್ರಾವಿಡ ಸಮುದಾಯ ಸೌಲಭ್ಯದಿಂದ ವಂಚಿತವಾಗುತ್ತಿದೆ.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪರಿಶಿಷ್ಟ ಪಂಗಡ ಮತ್ತು ಜಾತಿಗೆ ಸೇರಿದ ಮಂದಿ ನಿವೇಶನದ ಕೊರತೆಯನ್ನು ಎದುರಿಸುತ್ತಿದ್ದಾರೆ. ತೋಟ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು ಮತ್ತಿತರ ಕಾರ್ಮಿಕ ವರ್ಗ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕೊಡಗಿನ ಸರ್ಕಾರಿ ಪೈಸಾರಿ ಜಮೀನಿನ ಸಮಗ್ರ ಸರ್ವೆ ಮಾಡಿಸಬೇಕು, ಹೊರ ರಾಜ್ಯದವರು ಮಾಡಿಕೊಂಡಿರುವ ಒತ್ತುವರಿಯನ್ನು ಪತ್ತೆ ಹಚ್ಚಿ ಕೊಡಗಿನವರೇ ಆದ ಬುಡಕಟ್ಟು ಜನರು, ಭೂರಹಿತ ಸೈನಿಕರು, ವಿಧವೆಯರು ಮತ್ತಿತರ ಅರ್ಹರಿಗೆ ಹಂಚಬೇಕು. 6ಸಾವಿರ ಎಕರೆಯಷ್ಟಿರುವ ಸರ್ಕಾರಿ ಜಮೀನನ್ನು ಸರ್ಕಾರ ವಶಕ್ಕೆ ಪಡೆದುಕೊಂಡು ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕೆಂದು ಸೋಮಪ್ಪ ಮನವಿ ಮಾಡಿದರು.









