ಮಡಿಕೇರಿ ಜ.27 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯ ಕೋಟೆ ಆವರಣ, ಪಾಡಿನಾಡಿನ ಯವಕಪಾಡಿಯ ನಾಲ್ ನಾಡ್ ಅರಮನೆ ಮತ್ತು ದೇವಟ್‌ಪರಂಬ್ ನರಮೇಧದ ಸ್ಮಾರಕ ಸ್ಥಳದಲ್ಲಿ “ಅಂತರರಾಷ್ಟ್ರೀಯ ಹತ್ಯಾಕಾಂಡದ ದಿನ” ವನ್ನು ಆಚರಿಸಿತು.
ಸಂಚಿನಿಂದ ಹತ್ಯೆಗೀಡಾದ ಹಿರಿಯರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಿಎನ್‌ಸಿ ಪ್ರಮುಖರು ಗೌರವ ಅರ್ಪಿಸಿದರು.
ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೆಳದಿ/ಪಾಲೇರಿ ಅರಸರಿಂದ ಮಡಿಕೇರಿ ಕೋಟೆಯಲ್ಲಿ ನಡೆದ ರಾಜಕೀಯ ಹತ್ಯೆಗಳು, ನಾಲ್ನಾಡ್ ಅರಮನೆಯಲ್ಲಿ ಕೆಳದಿ/ಪಾಲೇರಿ’ ಆಡಳಿತಗಾರರಿಂದ ಕೊಡವ ಬುಡಕಟ್ಟು ಜನಾಂಗದ ಮಂದಿಗೆ ಅಮಾನವೀಯ ಮರಣದಂಡನೆ ಮತ್ತು ದೇವಟ್ ಪರಂಬು ನರಮೇಧ ಈ ಮೂರು ದುರಂತ ಕೃತ್ಯಗಳನ್ನು ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು. ಕೊಡವರು ಹತ್ಯೆಗೀಡಾದ ಮೂರೂ ಪ್ರದೇಶದಲ್ಲಿ ಸ್ಮಾರಕ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಅರಮನೆಗಳು ಮತ್ತು ದೇವಟ್‌ಪರಂಬ್‌ನಲ್ಲಿ ನಡೆದ ಮೂರು ದುರಂತ ನರಮೇಧಗಳನ್ನು ಕೊಡವ ಬುಡಕಟ್ಟು ಜನಾಂಗ ಮರೆಯಲು ಸಾಧ್ಯವಿಲ್ಲ. ಕೊಡವ ಜನಾಂಗೀಯ ಇತಿಹಾಸದಲ್ಲಿ ಈ ಆಘಾತಕಾರಿ ಅಧ್ಯಾಯವನ್ನು ನೆನಪಿಸಿಕೊಳ್ಳಲಾಗುತ್ತದೆ ಮತ್ತು ಮುಂದಿನ ಪೀಳಿಗೆಗೆ ರವಾನಿಸಲಾಗುತ್ತದೆ.
ಮಡಿಕೇರಿ ಕೋಟೆ ಮತ್ತು ನಾಲ್ನಾಡ್ ಅರಮನೆಯು ಕೊಡವರ ರಾಜಕೀಯ ಹತ್ಯೆಗಳಿಗೆ ನೇರ ಸಾಕ್ಷಿಯಾಗಿದೆ, ಮೂಲನಿವಾಸಿ ಕೊಡವ ಜನಾಂಗದವರು ಅರಮನೆಯ ಪಿತೂರಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನು ಹಿರಿಯ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜ್ಞಾನಪೀಠ ಪುರಸ್ಕೃತ ಕಾದಂಬರಿ “ಚಿಕ್ಕ ವೀರರಾಜೇಂದ್ರ” ದಲ್ಲಿ ಎಳೆ ಎಳೆಯಾಗಿ ಚಿತ್ರಿಸಲಾಗಿದೆ.
ಹಿರಿಯರಾದ ಡಾ.ಐ.ಎಂ.ಮುತ್ತಣ್ಣ ಅವರು “ಟಿಪ್ಪು ಎಕ್ಸ್ ರೇಡ್” ಕೃತಿಯ ಮೂಲಕ ದೇವಟ್ ಪರಂಬುವಿನಲ್ಲಿ ನಡೆದ ದುರಂತ ನರಮೇಧವನ್ನು ನಿರೂಪಿಸಿದ್ದಾರೆ. ಕೊಡವ ಬುಡಕಟ್ಟು ಯೋಧರು ಹೈದರ್ ಹಾಗೂ ಟಿಪ್ಪುವನ್ನು 32 ಬಾರಿ ಸೋಲಿಸಿದರು. ಸೋಲಿನ ಸೇಡು ತೀರಿಸಿಕೊಳ್ಳಲು ನಿರಂಕುಶಾಧಿಕಾರಿ ಟಿಪ್ಪು ಸಂಪೂರ್ಣ ಕೊಡವ ಬುಡಕಟ್ಟು ಯೋಧರನ್ನು ಹೊಡೆದು ಹಾಕಲು ಸಂಚು ಹೂಡಿ ಹತ್ಯಾಕಾಂಡ ನಡೆಸಿದನು. ಇದು ಅತ್ಯಂತ ದುರಾದೃಷ್ಟಕರ ಘಟನೆಯಾಗಿದ್ದು, ಮೂರು ದುರಂತ ಕೃತ್ಯಗಳನ್ನು ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸುವ ಮೂಲಕ ಕೊಡವರ ನೋವಿಗೆ ಗೌರವ ನೀಡಬೇಕು ಎಂದು ನಾಚಪ್ಪ ಹೇಳಿದರು.
ಚೋಳಪಂಡ ಜ್ಯೋತಿ ನಾಣಯ್ಯ ಕಾಂಡೇರ ಸುರೇಶ್, ಪಟ್ಟಮಾಡ ಕುಶ, ಆಲಮಂಡ ಜೈ, ಚೋಳಪಂಡ ನಾಣಯ್ಯ, ಪುಟ್ಟಿಚಂಡ ಡಾನ್ ದೇವಯ್ಯ, ಅಜ್ಜಿಕುಟ್ಟೀರ ಲೋಕೇಶ್, ಪುಲ್ಲೇರ ಕಾಳಪ್ಪ, ಮಣವಟ್ಟೀರ ಚಿಣ್ಣಪ್ಪ, ಪಾರ್ವಂಗಡ ನವೀನ್, ಕಿರಿಯಮಾಡ ಶೆರಿನ್, ಕಾಟುಮಣಿಯಂಡ ಉಮೇಶ್, ಮೇದುರ ಕಂಠಿ, ಬಡುವಂಡ ವಿಜಯ, ಕೂಪದಿರ ಸಾಬು, ಪುದಿಯೊಕ್ಕಡ ಕಾಶಿ, ಮಂದಪಂಡ ಸೂರಜ್, ಮಂದಪಂಡ ನಾಚಪ್ಪ, ಅರೆಯಡ ಗಿರೀಶ್, ಅಪ್ಪಾರಂಡ ಪ್ರಸಾದ್, ಮೇಕೇರಿರ ಬಬ್ಬು, ಪಾಲೇಕಂಡ ಪ್ರತಾಪ್, ಅಪ್ಪಾರಂಡ ವಿವೇಕ್, ಅಪ್ಪಾರಂಡ ಪ್ರಕಾಶ್, ಬೊಲ್ಲಾರ್ಪಂಡ ಮಾಚಯ್ಯ, ಚಂಬಂಡ ಜನತ್ ಅವರುಗಳು ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿದರು.











