ಮಡಿಕೇರಿ ಜ.30 NEWS DESK : ಸಂಸದ ಪ್ರತಾಪ್ ಸಿಂಹ ಅವರು ಧೈರ್ಯವಿದ್ದರೆ ಅಭಿವೃದ್ಧಿ ಕಾರ್ಯಗಳ ಕುರಿತು ಬಹಿರಂಗ ಚರ್ಚೆಗೆ ಬರಲಿ, ತಾವು ಸಂಸದರಾಗಿ ಆಯ್ಕೆಯಾದ ಆರಂಭದ 7 ತಿಂಗಳಿನಲ್ಲಿ ಕನಿಷ್ಠ 70 ಪೈಸೆಯನ್ನು ಕೇಂದ್ರ ಸರ್ಕಾರದಿಂದ ಕೊಡಗು ಜಿಲ್ಲೆಗೆ ತಂದಿದ್ದರೆ ಶ್ವೇತಪತ್ರ ಹೊರಡಿಸಲಿ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಕೊಡಗು ಜಿಲ್ಲೆಯ ಕಡೆ ತಲೆಹಾಕದ ಸಂಸದ ಪ್ರತಾಪ್ ಸಿಂಹ ಅವರು ಇದೀಗ ಚುನಾವಣೆಯ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಳ್ಳು ಆರೋಪಗಳನ್ನ ಮಾಡಿ ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಮ್ಮ ಅವಧಿಯ ಆರಂಭದ ಏಳು ತಿಂಗಳಿನಲ್ಲಿ ಕನಿಷ್ಠ 70 ಪೈಸೆಯನ್ನು ಕೇಂದ್ರದಿಂದ ಕೊಡಗಿಗೆ ತಂದಿದ್ದರೆ ಸಂಸದರು ಶ್ವೇತಪತ್ರ ಹೊರಡಿಸಲಿ, ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಒತ್ತಾಯಿಸಿದರು.
ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವ ಪ್ರತಾಪ್ ಸಿಂಹ ಅವರ ಬಗ್ಗೆ ಅವರ ಪಕ್ಷದವರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಹೆಸರು ಹೇಳಿಕೊಂಡು ಈ ಬಾರಿ ಚುನಾವಣೆ ಎದುರಿಸುವ ಪ್ರಯತ್ನದಲ್ಲಿ ತೊಡಗಿರುವ ಸಂಸದರಿಗೆ ವೈಯುಕ್ತಿಕ ವರ್ಚಸ್ಸು ಇಲ್ಲದಾಗಿದೆ. ಮೈಸೂರು, ಮಂಡ್ಯ, ಬೆಂಗಳೂರು ಭಾಗದಲ್ಲಿ ಹೆದ್ದಾರಿ ನಿರ್ಮಾಣದ ವಿಚಾರದಲ್ಲಿ ಸಂಸದರು ನಡೆದುಕೊಂಡ ರೀತಿಯ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು ಹಾಗೂ ಜನರಲ್ಲೇ ವಿರೋಧವಿದೆ. ಪ್ರತಾಪ್ ಸಿಂಹ ಅವರು ತಮ್ಮ ಪಕ್ಷದ ಸಿದ್ಧಾಂತದ ಆಧಾರದಲ್ಲಿ ಚುನಾವಣೆ ಎದುರಿಸಬೇಕೇ ಹೊರತು ನಮ್ಮ ಮುಖ್ಯಮಂತ್ರಿಗಳು, ಮಂತ್ರಿಗಳು ಹಾಗೂ ಶಾಸಕರ ಹೆಸರು ಹೇಳುವ ಅಗತ್ಯವಿಲ್ಲ. ಹಿಂದೆ ತಮ್ಮದೇ ಶಾಸಕರೊಂದಿಗೆ ಮುನಿಸಿಕೊಂಡಿದ್ದ ಅವರು ಇದೀಗ ಕೆ.ಜಿ.ಬೋಪಯ್ಯ ಅವರೊಂದಿಗೆ ಸೇರಿಕೊಂಡು ಮತಗಳಿಕೆಯ ತಂತ್ರ ಅನುಸರಿಸುತ್ತಿದ್ದಾರೆ ಎಂದು ಧರ್ಮಜ ಉತ್ತಪ್ಪ ವ್ಯಂಗ್ಯವಾಡಿದರು.
ಕೊಡಗು ಜಿಲ್ಲೆಯ ಇಬ್ಬರು ಶಾಸಕರನ್ನು ಎತ್ತಿಕಟ್ಟಿ ರಾಜಕೀಯ ಮಾಡುವ ಭ್ರಮೆ ಬೇಡ. ಇಬ್ಬರು ಕಾಂಗ್ರೆಸ್ ಶಾಸಕರು ಒಗ್ಗಟ್ಟಗಾಗಿ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
::: ರೈಲು ಎಲ್ಲಿ :::
ಸಂಪಾಜೆ ಹೆದ್ದಾರಿಯ ನಿರ್ವಹಣೆಗಾಗಿ 19.20 ಕೋಟಿ ರೂ. ಬಿಡುಗಡೆಯಾಗಿದೆ ಹೊರತು ಇದು ಅಭಿವೃದ್ಧಿಗಾಗಿ ಸಂಸದರು ತಂದ ಹಣವಲ್ಲ. ಜಿಲ್ಲೆಗೆ ರೈಲು ಮಾರ್ಗ ತರುವುದಾಗಿ 2013ರಲ್ಲಿ ಭರವಸೆ ನೀಡಿದ್ದ ಪ್ರತಾಪ್ ಸಿಂಹ ಅವರು ಇಲ್ಲಿಯವರೆಗೆ ಇದನ್ನು ಈಡೇರಿಸಿಲ್ಲ. ರೈಲ್ವೆ ಟಿಕೆಟ್ ಬುಕ್ಕಿಂಗ್ ಕೌಂಟರ್ ಬಂದ್ ಮಾಡಿರುವುದೇ ಇವರ ದೊಡ್ಡ ಸಾಧನೆಯಾಗಿದೆ ಎಂದು ಟೀಕಿಸಿದರು.
ಸಾಮಾನ್ಯ ಯೋಜನೆಯಂತೆ ದೇಶವ್ಯಾಪಿ ಮೊಬೈಲ್ ಟವರ್ ಗಳನ್ನು ಅಳವಡಿಸಲಾಗಿದೆ. ಅದೇ ಮಾದರಿಯಲ್ಲಿ ಕೊಡಗಿನಲ್ಲೂ ಇತ್ತೀಚೆಗಷ್ಟೆ ಟವರ್ ಗಳು ತಲೆ ಎತ್ತಿವೆ. ಕೇವಲ ಟವರ್ ಗಳ ನಿರ್ಮಾಣ ಅಭಿವೃದ್ಧಿಯಲ್ಲ ಎಂದು ಹೇಳಿದರು.
ಸಂಸದರಾಗಿ ಪ್ರತಾಪ್ ಸಿಂಹ ಅವರು ಕೊಡಗು ಜಿಲ್ಲೆಗೆ ತಂದಿರುವ ಪ್ರತ್ಯೇಕವಾದ ವಿಶೇಷ ಯೋಜನೆ ಏನು ಎಂಬುವುದನ್ನು ಮೊದಲು ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಬದ್ಧವಾಗಿದೆ. ಜನಪರವಾಗಿ ಘೋಷಿಸಿದ ಗ್ಯಾರಂಟಿಗಳನ್ನು ಪೂರೈಸಲು ದೊಡ್ಡ ಮೊತ್ತದ ಹಣ ಬೇಕಾಗಿದ್ದ ಕಾರಣ ಇಷ್ಟು ದಿನಗಳ ಕಾಲ ಕ್ರೋಢೀಕರಿಸಲಾಗಿದೆ. ಇನ್ನು ಮುಂದೆ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ನಡೆಯಲಿದೆ ಎಂದು ಧರ್ಮಜ ಉತ್ತಪ್ಪ ಸ್ಪಷ್ಟಪಡಿಸಿದರು.
::: ತಲಾ ರೂ.25ಕೋಟಿ :::
ಕೊಡಗು ಜಿಲ್ಲೆಯ ಇಬ್ಬರು ಶಾಸಕರ ಕ್ಷೇತ್ರಕ್ಕೆ ತಲಾ 25 ಕೋಟಿಗಳ ವಿಶೇಷ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ತಲಾ 17 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. ಇದೇ ರೀತಿಯಲ್ಲಿ ಜಿಲ್ಲೆಯ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಾಂತರ ಅನುದಾನವನ್ನು ತರಲಾಗುತ್ತಿದೆ. ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುವ ಬದಲು ಪ್ರತಾಪ್ ಸಿಂಹ ಅವರು ಬಹಿರಂಗ ಚರ್ಚೆಗೆ ಬರುವುದು ಸೂಕ್ತ ಎಂದರು.
ಕಾಂಗ್ರೆಸ್ ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ ಮಾತನಾಡಿ, 2014ರಲ್ಲಿ ಕೊಡಗಿಗೆ ಪ್ರತ್ಯೇಕವಾಗಿ ಘೋಷಿಸಿದ ಪ್ರಣಾಳಿಕೆಯಲ್ಲಿ ಪ್ರತಾಪ್ ಸಿಂಹ ಅವರು, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕಳೆದ ಹತ್ತು ವರ್ಷಗಳಿಂದ ಕಾಫಿ ಕ್ಷೇತ್ರಕ್ಕೆ ಆಗುತ್ತಿರುವ ಕಷ್ಟ-ನಷ್ಟಗಳ ಬಗ್ಗೆ ಎಲ್ಲೂ ಅವರು ಮಾತನಾಡಿಲ್ಲ ಎಂದು ಆರೋಪಿಸಿದರು.
2018 ರೊಳಗೆ ಕೊಡಗಿಗೆ ರೈಲು ಮಾರ್ಗ ಬಾರದಿದ್ದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದರು. ಆದರೆ ಇಂದಿಗೂ ರೈಲು ಮಾರ್ಗ ಮತ್ತು ಮಿನಿ ವಿಮಾನ ನಿಲ್ದಾಣದ ಯೋಜನೆ ಸಾಕಾರಗೊಂಡಿಲ್ಲ. ಮಳೆಹಾನಿಯಿಂದ ಕೊಡಗು ಜಿಲ್ಲೆ ಸಂಕಷ್ಟಕ್ಕೆ ಸಿಲುಕಿದಾಗಲು ಯಾವುದೇ ನೆರವನ್ನು ನೀಡಿಲ್ಲ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಭಿನ್ನಾಭಿಪ್ರಾಯ ಮೂಡಿಸಿ ಮತಪಡೆಯುವ ತಂತ್ರಗಾರಿಕೆಯಲ್ಲಿ ಪ್ರತಾಪ್ ಸಿಂಹ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಇಬ್ಬರು ಶಾಸಕರು ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ. ಸಂಸದರು ಜಿಲ್ಲೆಯ ಜನರ ನೋವಿಗೆ ಎಂದಾದರು ಸ್ಪಂದಿಸಿದ್ದಾರೆಯೇ, ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಪ್ರಧಾನಿ ದೇವೆಗೌಡರ ಕಾಲು ಹಿಡಿಯಲು ಆರಂಭಿಸಿದ್ದಾರೆ. ಕಳೆದ ಹತ್ತು ವರ್ಷಗಳ ಕಾಲ ಒಳ್ಳೆಯ ಕೆಲಸ ಮಾಡಿದ್ದರೆ ಕಾಲು ಹಿಡಿಯುವ ಅಗತ್ಯವಿತ್ತೇ ಎಂದು ಟಾಟುಮೊಣ್ಣಪ್ಪ ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್ ಮಾತನಾಡಿ, ಸಂಸದರ ಸುಳ್ಳು ಆರೋಪಗಳಿಗೆ ಕಾಂಗ್ರೆಸ್ ಸರ್ಕಾರ ಬಗ್ಗಲ್ಲ. ಕೊಡಗು ಜಿಲ್ಲೆಯ ಮಟ್ಟಿಗೆ ಪ್ರತಾಪ್ ಸಿಂಹ ಅವರ ಸಾಧನೆ ಶೂನ್ಯವಾಗಿದೆ. ಸಂಸದರಾಗಿ ಇಷ್ಟು ವರ್ಷ ಕಳೆದಿದ್ದರೂ ಜಿಲ್ಲೆಯ ಹಲವು ಗ್ರಾಮಗಳಿಗೆ ಇಂದಿಗೂ ಭೇಟಿ ನೀಡಿಲ್ಲ. ಅವರ ಪಕ್ಷದ ಕಾರ್ಯಕರ್ತರೇ ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಜಿಲ್ಲೆಯ ಇಬ್ಬರು ಶಾಸಕರು ಪ್ರಮಾಣಿಕವಾಗಿ ಮತ್ತು ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಯಾವ ಸುಳ್ಳು ಆರೋಪಗಳಿಗೂ ಧೃತಿಗೆಡುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಮಾಧ್ಯಮ ವಕ್ತಾರ ಟಿ.ಪಿ.ರಮೇಶ್ ಹಾಗೂ ವಕ್ತಾರ ತೆನ್ನಿರ ಮೈನಾ ಉಪಸ್ಥಿತರಿದ್ದರು. (ವಿಡಿಯೋಕ್ಕಾಗಿ ವಿಡಿಯೋ ಗ್ಯಾಲರಿ ಕ್ಲಿಕ್ ಮಾಡಿ)









