ಮಡಿಕೇರಿ ಫೆ.1 NEWD DESK : ಮಾನವ ಶಾಸ್ತ್ರ ವಿಜ್ಞಾನಿಗಳು ಮತ್ತು ಜನಾಂಗೀಯ ಶಾಸ್ತ್ರ ವಿಜ್ಞಾನಿಗಳು ಮಾತ್ರ ಕೊಡವ ಬುಡಕಟ್ಟು ಗುಣಲಕ್ಷಣಗಳನ್ನು ನಿರ್ಧರಿಸಬಹುದೇ ಹೊರತು ಸಂಸದರು ಈ ವಿಷಯದ ಬಗ್ಗೆ ಅಧಿಕಾರ ಹೊಂದಿಲ್ಲ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವರು ಮತ್ತು ಕೊಡವ ಬುಡಕಟ್ಟು ಜನಾಂಗದ ಭವಿಷ್ಯವನ್ನು ನಿರ್ಧರಿಸಲು ಅವರು ಯಾರೂ ಅಲ್ಲ. ಅವರು ಸಂವಿಧಾನ ತಜ್ಞರೂ ಅಲ್ಲ ಅಥವಾ ಮಾನವ ಶಾಸ್ತ್ರಜ್ಞರೂ ಅಲ್ಲ ಎಂದು ತಿಳಿಸಿದ್ದಾರೆ.
ಬುಡಕಟ್ಟು ಅಲ್ಲದ ನಗರೀಕರಣಗೊಂಡ ತಳವಾರ ಮತ್ತು ಪರಿವಾರವನ್ನು ಎಸ್ಟಿ ಪಟ್ಟಿಗೆ ಹೇಗೆ ಸೇರಿಸಿದರು? ಅವರಿಗೆ ಯಾವ ಮಾನದಂಡವನ್ನು ಅನ್ವಯಿಸಲಾಗಿದೆ? ಇದು ಕೇವಲ ರಾಜಕೀಯ ಲಾಭಕ್ಕಾಗಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕೊಡವರ ಜನಾಂಗೀಯ ಕುಲಶಾಸ್ತ್ರ ಅಧ್ಯಯನಕ್ಕೆ ಧಕ್ಕೆ ತರುವ ತಂತ್ರವನ್ನು ರೂಪಿಸಿದವರು ಯಾರು ಎಂಬುವುದು ಈಗ ಸ್ಪಷ್ಟವಾಗಿದೆ. ಕೊಡವರ ಮೇಲೆ ನೈಜ ಅಭಿಮಾನವಿದ್ದರೆ ಸಂಸದರು ತಮ್ಮ ಲೋಕಸಭಾ ಸ್ಥಾನವನ್ನು ತೆರವು ಮಾಡಲಿ ಮತ್ತು ಕೊಡಗನ್ನು ಪ್ರತಿನಿಧಿಸಲು ನಿಜವಾದ ಅವಕಾಶ ವಂಚಿತ, ದೇಶಭಕ್ತ ಕೊಡವರಿಗೆ ದಾರಿ ಮಾಡಿಕೊಡಲಿ. ಲೋಕಸಭಾ ಚುನಾವಣೆಗೆ ಇನ್ನು ಕೇವಲ 2 ತಿಂಗಳು ಮಾತ್ರ ಬಾಕಿ ಉಳಿದಿದೆ. ನಿಜವಾಗಿ ಕೊಡವರ ಕುರಿತು ಕಾಳಜಿ ಇದ್ದರೆ, ತಮ್ಮ ಅಧಿಕಾರಾವಧಿಯ ಕೊನೆಯ ಅಧಿವೇಶನದಲ್ಲಿ ಈಗಾಗಲೇ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಪ್ರತಿಪಾದಿಸಲ್ಪಟ್ಟ ಸಿಕ್ಕಿಂನ ಬೌದ್ಧ ಸನ್ಯಾಸಿಗಳ “ಸಂಘ” ಮತಕ್ಷೇತ್ರದ ಮಾದರಿಯಲ್ಲಿ ಕೊಡವರಿಗೆ ವಿಶೇಷ ಅಮೂರ್ತ ಲೋಕಸಭಾ ಕ್ಷೇತ್ರವನ್ನು ನೀಡಲು ಒತ್ತಾಯಿಸಲಿ. ಆ ಮೂಲಕ ಕೊಡವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲಿ ಎಂದು ಆಗ್ರಹಿಸಿದ್ದಾರೆ.
ಕೊಡವರ ಪವಿತ್ರ ಯಾತ್ರಾಸ್ಥಳವಾದ ತಲಕಾವೇರಿಯ ಮಧ್ಯಸ್ಥಿಕೆಯ ವಿಚಾರದಲ್ಲಿ ಸಂಚು ರೂಪಿಸಿದವರು ಯಾರು? ದೇವಟ್ ಪರಂಬು ಕೊಡವ ನರಮೇಧ ದುರಂತ ಸ್ಮಾರಕ ಸ್ಥಾನವನ್ನು ಅಳಿಸಿ ಹಾಕಲು ಪಿತೂರಿ ರೂಪಿಸಿದವರು ಯಾರು ಎಂಬುವುದು ಸ್ಪಷ್ಟವಾಗಿದೆ. ಕೊಡವರ ಧಾರ್ಮಿಕ ಸಂಸ್ಕಾರ ಬಂದೂಕು ಹಕ್ಕನ್ನು ಕಸಿದುಕೊಳ್ಳಲು ಷಡ್ಯಂತ್ರ ರೂಪಿಸಿದವರು ಯಾರು ಎನ್ನುವುದೂ ತಿಳಿದಿದೆ. ಅವರು ತಮ್ಮ ಇಡೀ ಸಮುದಾಯವನ್ನು ಧ್ರುವೀಕರಿಸಿದರು ಮತ್ತು ಸೂಕ್ಷ್ಮ ಸಮುದಾಯವಾದ ಕೊಡವರ ವಿರುದ್ಧ ಧಂಗೆಯನ್ನು ಪ್ರಚೋದಿಸಿದರು. ಇದನ್ನೆಲ್ಲ ಅರಿಯದಷ್ಟು ಮೂರ್ಖರು ಕೊಡವರಲ್ಲ ಎಂದು ನಾಚಪ್ಪ ಹೇಳಿದ್ದಾರೆ.
2024 ರ ಜನವರಿ 25 ರಂದು ಕೂಟ ಕಟ್ಟಿಕೊಂಡು ಮುಖ್ಯಮಂತ್ರಿಗಳ ಬಳಿ ತೆರಳಿ ಕೊಡವ ಲ್ಯಾಂಡ್ ವಿರುದ್ಧ ಈರ್ಷೆಯಿಂದ ಚಾಡಿ ಮಾಡಿದವರು ಯಾರು ಎನ್ನುವುದು ನಮಗೆ ತಿಳಿದಿದೆ. ಕೊಡವರನ್ನು ರಕ್ಷಿಸಬೇಕಾದ ರಾಜ್ಯದ ಬಹುಸಂಖ್ಯಾತ ಸಮುದಾಯವು ಕೊಡವ ಸಮುದಾಯವನ್ನು ಜನಾಂಗೀಯವಾಗಿ ಗುಡಿಸಿ ಹಾಕುವ ಪ್ರಕ್ರಿಯೆಗೆ ಮುಂದಾಗಿದ್ದು, ಇದರ ಜವಾಬ್ದಾರಿಯನ್ನು ಶಾಸನ ರೂಪಿಸುವವರಿಗೆ ವಹಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಅವರು ಕೊಡವರ ಏಕೈಕ ಪಾಲಕರು ಎಂದು ನಟಿಸುತ್ತಾರೆ, ಕೊಡವ ಮಹಿಳೆಯರ ಸೌಂದರ್ಯವನ್ನು ಹೊಗಳುತ್ತಾರೆ, ಕೊಡವ ಯುದ್ಧ ವೀರರನ್ನು ಪೀಠದ ಮೇಲೆ ಕೂರಿಸುತ್ತಾರೆ, ನಮ್ಮ ಪಾನ್ ಭಾರತ ದರ್ಶನವನ್ನು ಮೆಚ್ಚುತ್ತಾ ಇದರ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಕೊಡವರನ್ನು ಹಿಮ್ಮೆಟ್ಟಿಸುತ್ತಾ ಬಲೆಗೆ ಬೀಳಿಸಿ ಮೂರ್ಖರನ್ನಾಗಿಸುತ್ತಾರೆ. ತಮ್ಮ ದೈತ್ಯಾಕಾರದ ಜನಸಂಖ್ಯಾ ತೂಕದೊಂದಿಗೆ ಎಲ್ಲವನ್ನೂ ಮತ್ತು ಯಾರನ್ನಾದರೂ ಬೆದರಿಸಬಲ್ಲರು ಎಂದು ಅವರು ನಂಬುತ್ತಾರೆಂದು ನಾಚಪ್ಪ ಟೀಕಿಸಿದ್ದಾರೆ.
ರಾಜಕೀಯವಾಗಿ ನಿಷ್ಕಪಟವಾದ ಕೊಡವ ಮತದಾರರ ಲಾಭವನ್ನು ಪಡೆದುಕೊಂಡು ಕೊಡವರ ವಿರುದ್ಧವೇ ಸಂಚು ಹೂಡುವುದು ಯಾರೆಂದು ತಿಳಿದಿದೆ. ಕೊಡವರ ಮೇಲೆ ಅಷ್ಟೊಂದು ಅಭಿಮಾನವಿದ್ದರೆ ಪ್ರತ್ಯೇಕ ಕೊಡಗು ಲೋಕಸಭಾ ಕ್ಷೇತ್ರವನ್ನು ಕೊಡವರಿಗೆ ಬಿಟ್ಟುಕೊಡಲಿ ಎಂದು ನಾಚಪ್ಪ ಸವಾಲು ಹಾಕಿದ್ದಾರೆ.