ಮಡಿಕೇರಿ ಫೆ.1 NEWS DESK : ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳನ್ನು ಪ್ರತಿರೋಧಿಸಿ, ದುಡಿಯುವ ಜನಸಮುದಾಯದ ಸಮಸ್ಯೆಗಳನ್ನು ಪರಿಹರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಬೆಂಗಳೂರಿನಲ್ಲಿ ನಡೆದ ಬಜೆಟ್ ಪೂರ್ವ ಜನಾಗ್ರಹ ಬೃಹತ್ ಪ್ರತಿಭಟನೆ ಮತ್ತು ಬಹಿರಂಗ ಅಧಿವೇಶನದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‍ನ ಕೊಡಗು ಜಿಲ್ಲಾ ಸಮಿತಿ ಪಾಲ್ಗೊಂಡಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಕಾರ್ಮಿಕರ ಕನಿಷ್ಠ ವೇತನ, ಗೌರವಧನದ ಹೆಚ್ಚಳಕ್ಕಾಗಿ ಬಿಸಿಯೂಟ, ಅಂಗನವಾಡಿ, ಆಶಾ, ಕೈಗಾರಿಕಾ, ಕಟ್ಟಡ, ಸಾರಿಗೆ, ಬೀಡಿ, ಪ್ಲಾಂಟೇಷನ್, ಬ್ಯಾಂಕ್-ವಿಮಾ, ಗಿಗ್, ಗಣಿಕಾರ್ಮಿರಿಂದ ಪ್ರತಿಭಟನೆ ನಡೆಯಿತು.
ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಪ್ರಿಯಾಂಕ ಗಾಂಧಿಯವರು ಘೋಷಿಸಿದ್ದ 6ನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ ರೂ.10 ಸಾವಿರ, ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಗೆ ರೂ.10 ಸಾವಿರ ಮತ್ತು ಆಶಾ ಕಾರ್ಯಕರ್ತೆಯರಿಗೆ ರೂ.10 ಸಾವಿರ ಗೌರವ ಧನ ಹೆಚ್ಚಿಸುವುದರ ಜೊತೆಗೆ ಎಲ್ಲಾ ಯೋಜನೆಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಯಕರ್ತೆಯರಿಗೆ ನಿವೃತ್ತಿ ವೇತನ ಇಡುಗಂಟು, ಇಎಸ್‍ಐ ಸೌಲಭ್ಯ ನೀಡಬೇಕೆಂದು ಕಾರ್ಮಿಕರು ಒತ್ತಾಯಿಸಿದರು.
ಕಾರ್ಮಿಕರ ಕಾನೂನುಗಳ ಜಾರಿಯನ್ನು ರದ್ದು ಮಾಡಿ ಹಿಂಪಡೆಯಬೇಕು ಮತ್ತು ಕನಿಷ್ಠ ವೇತನದ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕು. ಪ್ಲಾಂಟೇಶನ್ ಕಾರ್ಮಿಕರಿಗೆ ಸಮರ್ಪಕ ವೇತನ, ವಸತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಹಣದ ದುರುಪಯೋಗ ತಡೆದು, ನೈಜ ಕಾರ್ಮಿಕರ ಕುಟುಂಬಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕು. ಬೀಡಿ ಕಾರ್ಮಿಕರ ತುಟ್ಟಿ ಭತ್ಯೆ, ಕನಿಷ್ಠ ವೇತನ ಹಾಗೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಗಿಗ್ ವರ್ಕರ್ಸ್‍ಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ನೀಡಬೇಕು. ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು. ಗಣಿ ಕಾರ್ಮಿಕರಿಗೆ ಸಮಾನ ವೇತನ ನೀಡಿ, ಸರ್ಕಾರಿ ಒಡೆತನ ಹೊಂದಿರುವ ಹಟ್ಟಿ ಚಿನ್ನದ ಕಂಪನಿಯ ಮೂಲಕ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‍ನ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಹೆಚ್.ಎಂ.ಸೋಮಪ್ಪ, ಉಪಾಧ್ಯಕ್ಷ ಮಣಿ, ರಾಜ್ಯ ಸಮಿತಿ ಸದಸ್ಯ ಕೆ.ವಿ.ಸುನಿಲ್, ಸದಸ್ಯರಾದ ಶಭಾನ, ರಮೇಶ್ ಮಾಯಮುಡಿ, ರಫೀಕ್ ನಲಗುಂದ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.