ಮಡಿಕೇರಿ ಫೆ.6 NEWS DESK : ಸಹಕಾರ ಸಂಘದ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಯೂ ಜಾಬ್‍ಚಾರ್ಟ್ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆದರೂ ಸರ್ಕಾರದಿಂದ ಯಾವುದಾದರೂ ಯೋಜನೆಗಳ ಕುರಿತು ಆದೇಶವಿದ್ದಲ್ಲಿ ನಮಗೆ ಸೇವೆ ಮಾಡಲು ನಮಗೆ ಒದಗಿ ಬಂದಿರುವ ಅವಕಾಶವೆಂದು ತಿಳಿದು ಕಾರ್ಯೊನ್ಮುಖರಾದಲ್ಲಿ ಆ ಕೆಲಸವು ಸಂತೃಪ್ತಿಯಿಂದ ಮುಗಿಯುತ್ತದೆ ಹಾಗೂ ನಮ್ಮ ಖಾತೆಯಲ್ಲಿ ಪುಣ್ಯ ಸಂಪಾದನೆಯೂ ಹೆಚ್ಚಾಗುತ್ತದೆ ಎಂದು ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್. ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಮಡಿಕೇರಿ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ಸಹಕಾರ ಸಂಘಗಳ ಕಾರ್ಯನಿರ್ವಾಹಕರಿಗೆ ಯಶಸ್ವಿನಿ ಆರೋಗ್ಯ ವರದಿಯ ಪರಿಸ್ಕೃತ ನಮೂನೆ ಕುರಿತು ವಿಶೇಷ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು.
‘ಯಶಸ್ವಿನಿ’ ಎಂಬುದು ಸಹಕಾರಿಗಳಿಗೆ ಮಾತ್ರ ಇರುವ ಅಪೂರ್ವ ಅವಕಾಶವಾಗಿದ್ದು, ಸಹಕಾರ ಚಳುವಳಿಗೆ ಪೂರಕವಾಗಿ ಆರೋಗ್ಯ ರಕ್ಷಣೆ ಮೂಲಕ ಸ್ವಾಸ್ಥ್ಯ ಸಮಾಜಕ್ಕೆ ಪ್ರೋತ್ಸಾಹ ನೀಡುವ ಯೋಜನೆಯಾಗಿದೆ. ಕಳೆದ ಬಾರಿಯ 50,000 ಕ್ಕೆ 81 ಸಾವಿರ ನೋಂದಣಿ ಗುರಿ ಸಾಧಿಸಿದ್ದು 720 ಜನ ಸೌಲಭ್ಯ ಪಡೆದಿದೆ. ಒಂದೂವರೆ ಕೋಟಿ ಮೊತ್ತದ ಸೌಲಭ್ಯ ಪಡೆದಿರುವುದನ್ನು ಅವಲೋಕಿಸಿದಾಗ ನಾವೆಲ್ಲ ಕೈಜೋಡಿಸಿದ ಪರಿಣಾಮ ಹಲವು ಸಹಕಾರಿಗಳು ನೆಮ್ಮದಿ ಜೀವನ ನಡೆಸುವಂತಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ, ಜಿಲ್ಲೆಯಲ್ಲಿ ಅದ್ಭುತ ರೀತಿಯಲ್ಲಿ ಯಶಸ್ವಿನಿ ಗುರಿ ಸಾಧಿಸಲಾಗಿದೆ. ಮತ್ತಷ್ಟು ಪರಿಶ್ರಮದೊಂದಿಗೆ ಜಿಲ್ಲೆಯ ಅಂದಾಜು 2.5 ಲಕ್ಷ ಸಹಕಾರಿಗಳಿಗೆ ಈ ಯೋಜನೆಯನ್ನು ತಲುಪಿಸಿದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಿದಂತಾಗುತ್ತದೆ. ಗ್ರಾಮದ ಉದ್ಧಾರ ದೇಶದ ಉದ್ಧಾರವೆಂದು ಮನಗಂಡಿರುವ ಕೇಂದ್ರ ಸರ್ಕಾರವು ಸಹ ಸಹಕಾರ ಕ್ಷೇತ್ರದ ಮೇಲೆ ವಿಶ್ವಾಸವಿರಿಸಿ ಚಳುವಳಿ ಮುನ್ನಡೆಸುವ ಮಹತ್ಕಾರ್ಯ ನಡೆಸುತ್ತಿದ್ದು, 5 ಟ್ರಿಲಿಯನ್ ಡಾಲರ್ ಸಾಧನೆಗಾಗಿ ದಾಪುಗಾಲಿಕ್ಕುತ್ತಿದೆ. ಇನ್ನೂ ಕೆಲವೇ ವರ್ಷಗಳಲ್ಲಿ ಜರ್ಮನಿ, ಜಪಾನ್ ದೇಶಗಳನ್ನು ಹಿಂದಿಕ್ಕಿ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ, ಅವರು ಸಹಕಾರ ಸಂಘಗಳು ಕುಡಿಯುವ ನೀರಿನ ಆಸರೆ, ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ, ಚಾರ್ಜಿಂಗ್ ಪಾಯಿಂಟ್, ಸ್ವಚ್ಛ ಭಾರತ ಇತ್ಯಾದಿ ಯೋಜನೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಳವಡಿಸಿಕೊಂಡು ಶಕ್ತಿ ಕೇಂದ್ರಗಳಾಗಿ ಹಣಕಾಸು ಹಾಗೂ ಉದ್ಯೋಗ ಕ್ರಾಂತಿಗೆ ಕಾರಣವಾಗಿ ಯುವ ಜನತೆಯ ಕಣ್ಮಣಿಯಾಗಬೇಕು ಎಂದರು.
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಕುರಿತು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಈ. ಮೋಹನ್ ಹಾಗೂ ಲೆಕ್ಕಪರಿಶೋಧನಾ ವರದಿಯ ಪರಿಸ್ಕೃತ ನಮೂನೆ ಕುರಿತು ನಿವೃತ್ತ ಹಿರಿಯ ಲೆಕ್ಕಪರಿಶೋಧಕ ಸಿರಿಲ್ ಮೊರಾಸ್ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಯೂನಿಯನ್ ನಿರ್ದೇಶಕರಾದ ಎನ್.ಎ.ರವಿ ಬಸಪ್ಪ, ಸಿ.ಎಸ್.ಕೃಷ್ಣ ಗಣಪತಿ, ಕನ್ನಂಡ ಸಂಪತ್, ಯಶಸ್ವಿನಿ ಯೋಜನೆ ಜಿಲ್ಲಾ ಸಂಯೋಜಕ ಚೇತನ್, ಕಾಸ್ಕಾರ್ಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಮುತ್ತುರಾಜ್, ಸಹಕಾರ ಇಲಾಖೆಯ ಪಿ.ಬಿ.ಮೋಹನ್, ಆಶಾ ಉಪಸ್ಥಿತರಿದ್ದರು.
ಯೂನಿಯನ್ ವ್ಯವಸ್ಥಾಪಕಿ ಆರ್.ಮಂಜುಳಾ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಸ್ವಾಗತಿಸಿ, ನಿರೂಪಣೆ, ವಂದನಾರ್ಪಣೆ ಮಾಡಿದರು.
Breaking News
- *ಸೋಮವಾರಪೇಟೆ : ಆರೋಗ್ಯ ತಪಾಸಣೆ ಮತ್ತು ಬೃಹತ್ ರಕ್ತದಾನ ಶಿಬಿರ*
- *ಸೋಮವಾರಪೇಟೆ : ಇಂದಿರಾ ಕ್ಯಾಂಟೀನ್ ಕಾಮಗಾರಿ ಅಪೂರ್ಣ : ಅಸಮಾಧಾನ*
- *ಡಿಜಿಟಲ್ ಸಾಕ್ಷರತೆ ಮಹಿಳೆಯರ ಬದುಕಿಗೆ ಸಹಕಾರಿಯಾಗಲಿದೆ : ಆನಂದ್ ಪ್ರಕಾಶ್ ಮೀನಾ*
- *ಸೋಮವಾರಪೇಟೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮ ದಿನಾಚರಣೆ*
- *ಸುಂಟಿಕೊಪ್ಪ : ಅಪ್ರಾಪ್ತರಿಗೆ ವಾಹನ ನೀಡಿದರೆ ಪೋಷಕರಿಗೆ ಶಿಕ್ಷೆ*
- *ಮಡಿಕೇರಿ : ನ.22 ರಂದು ಉದ್ಯೋಗ ಮೇಳ*
- *ನ.20 ರಂದು ಶಾಂತಳ್ಳಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಮಡಿಕೇರಿ : ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ : ಸಮವಸ್ತ್ರ ವಿತರಣೆ*
- *ರಾಷ್ಟ್ರೀಯ ಐಕ್ಯತಾ ದಿನ : ಮಡಿಕೇರಿಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ*
- *ಮಡಿಕೇರಿಯಲ್ಲಿ ವಿಶ್ವ ಪ್ರತಿಜೀವಕ ನಿರೋಧಕ ಜಾಗೃತಿ ಸಪ್ತಾಹ*