ಸೋಮವಾರಪೇಟೆ ಫೆ.7 NEWS DESK : ಕೊಡಗು ಜಿಲ್ಲಾ ಆರೋಗ್ಯ ಮತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಮಹಾ ವಿದ್ಯಾಲಯ ಮತ್ತು ಬೋಧಕ ಆಸ್ಪತ್ರೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭವ ಅಭಿಯಾನ ಅಡಿಯಲ್ಲಿ ಆರೋಗ್ಯ ಶಿಬಿರ ಮತ್ತು ವಿಶ್ವ ಕ್ಯಾನ್ಸರ್ ದಿನಾಚರಣೆ ನಡೆಯಿತು.
ಶಿಬಿರಕ್ಕೆ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿ, ಆಯುಷ್ಮಾನ್ ಭವ: ಅಭಿಯಾನದ ಆರೋಗ್ಯ ಶಿಬಿರ ಯೋಜನೆಯಡಿಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ಪ್ರತಿ ತಿಂಗಳು ನಡೆಸಲಾಗುತ್ತಿದ್ದು, ಸಾಕಷ್ಟು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಜನರಲ್ಲಿ ಇಂದಿಗೂ ಕ್ಯಾನ್ಸರ್ ಕಾಯಿಲೆ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದರಿಂದ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ. ತಮ್ಮ ಜೀವವನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮ ನಮಗೆ ನಾವೇ ಮಾಡಿಕೊಳ್ಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ಯಾನ್ಸರ್ ಕಾಯಿಲೆ ಮೊದಲ ಮತ್ತು ಎರಡನೇ ಹಂತದಲಿದ್ದ ಸಂದರ್ಭ ಸರಿಯಾದ ಚಿಕಿತ್ಸೆ ಪಡೆದಲ್ಲಿ ಯಾವುದೇ ಜೀವಹಾನಿ ಆಗುವುದಿಲ್ಲ. ವಿಜ್ಞಾನ ಬಹಳಷ್ಟು ಮುಂದುವರಿದಿದೆ ಪ್ರತಿಯೊಂದು ಕಾಯಿಲೆಗೂ ಚಿಕಿತ್ಸೆ ಇದೆ. ಕೆಲವರು ತಾತ್ಸಾರದಿಂದಾಗಿ, ಮೂಡನಂಬಿಕೆಗಳ ಕಾರಣದಿಂದಲೋ ಸರಿಯಾದ ಸಮಯಕ್ಕೆ ಕಾಯಿಲೆ ಕಂಡುಕೊಳ್ಳಲು ವಿಫಲರಾಗುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ನಂಜುಂಡಯ್ಯ ಮಾತನಾಡಿ, ಕ್ಯಾನ್ಸರ್ ಕಾಯಿಲೆ ಬಗ್ಗೆ ಭಯ ಬೇಡ, ಜಾಗೃತಿ ಇರಲಿ. ಕಾಯಿಲೆ ಬಗ್ಗೆ ಯಾವುದೇ ಕುರುಹು ಕಂಡು ಬಂದರೂ, ತಕ್ಷಣ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಪಡಬೇಕಿದೆ. ಇಂದು ತಂತ್ರಜ್ಞಾನ ಮುಂದುವರೆದಿದ್ದು, ಕಾಯಿಲೆಯನ್ನು ಬೇಗ ಕಂಡು ಹಿಡಿದಲ್ಲಿ, ಶೇ.98ರಷ್ಟು ಗುಣಮುಖರಾಗಬಹುದು ಎಂದರು.
ಆಯುಷ್ಮಾನ್ ಭವ: ಆರೋಗ್ಯ ಅಭಿಯಾನದ ನೋಡಲ್ ಅಧಿಕಾರಿ ಡಾ.ರಾಮಚಂದ್ರ ನಾಯಕ್ ಮಾತನಾಡಿ, ಕ್ಯಾನ್ಸರ್ ಮಕ್ಕಳಿಂದ ವಯೋವೃದ್ದರ ವರೆಗಿನವರನ್ನು ಕಾಡುತ್ತಿದೆ. ಮನುಷ್ಯನಿಗಿರುವ ಸಪ್ತ ವ್ಯಸನಗಳಿಂದ ಕಾಯಿಲೆಗಳು ಇನ್ನಿಲ್ಲದಂತೆ ಕಾಡುತ್ತಿವೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತೊಬ್ಬರ ನೆರವನ್ನು ಬಯಸದೆ, ನಾವೇ ಕಾಪಾಡಿಕೊಳ್ಳಲು ಮುಂಜಾಗ್ರತೆ ವಹಿಸಬೇಕೆಂದರು.
ವೇದಿಕೆಯಲ್ಲಿ ಡಿಎಸ್‍ಓ ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಇಂದೂಧರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ಪ್ಯಾರಾ ಮೆಡಿಕಲ್ ಸೆಂಟರ್‍ನ ಉಪನ್ಯಾಸಕಿ ಮಂಜುಳ ಇದ್ದರು.
ಶಿಬಿರದಲ್ಲಿ ಅಂಗವಿಕಲರ ಪ್ರಮಾಣ ಪತ್ರ, ಆರೋಗ್ಯ ಕಾರ್ಡ್ ನೋಂದಣಿ, ಆಯುಷ್ಮಾನ್ ಕಾರ್ಡ್ ಮತ್ತು ಪಿಎಂಜೆವೈ ಕಾರ್ಡ್ ನೋಂದಣಿ ಮಾಡಲಾಯಿತು.