ಮಡಿಕೇರಿ ಫೆ.8 NEWS DESK : ಒಣಗಿಸಲು ಇಟ್ಟಿದ್ದ ಕಾಫಿಯನ್ನು ಕಳ್ಳತನ ಮಾಡಿದ ಆರೋಪದಡಿ ಮೂವರನ್ನು ಹಾಗೂ ಖರೀದಿ ಮಾಡಿದ ಆರೋಪದಡಿ ವರ್ತಕರೊಬ್ಬರನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಳ್ಳತನದ ಆರೋಪದಡಿ ಕಗ್ಗೋಡ್ಲು ಗ್ರಾಮದ ನಿವಾಸಿಗಳಾದ ಜಯ.ಎಂ.ಸಿ (45) ಶರತ್ ಹೆಚ್.ಜಿ (31), ಸಾಜು.ಪಿ.ಜೆ (44) ಹಾಗೂ ಕಳ್ಳತನ ಮಾಡಿದ್ದ ಕಾಫಿಯನ್ನು ಯಾವುದೇ ರಶೀದಿ ಇಲ್ಲದೆ ಖರೀದಿ ಮಾಡಿದ ಆರೋಪದಡಿ ಮಡಿಕೇರಿಯ ವರ್ತಕ ಅಬ್ದುಲ್ ಅಜೀಜ್ (49) ವರ್ಷ ಎಂಬುವವರನ್ನು ದಸ್ತಗಿರಿ ಮಾಡಲಾಗಿದೆ. ಕಳ್ಳತನ ಮಾಡಿದ್ದ 150 ಕೆ.ಜಿ ಕಾಫಿ ಚೀಲಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ. ತಲೆ ಮರೆಸಿಕೊಂಡಿರುವ ಕಗ್ಗೋಡ್ಲು ಗ್ರಾಮದ ಕಿಶೋರ್ ಕುಮಾರ್ ಕೆ.ಎಂ ಹಾಗೂ ಮನು ರೈ ಎಂಬುವವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಗ್ಗೋಡ್ಲು ಗ್ರಾಮದ ನಿವಾಸಿ ಚಿದಾನಂದ.ವೈ.ಎ ಎಂಬುವವರು ತೋಟದ ಕಣದಲ್ಲಿ ಒಣಗಿಸಲು ಇಟ್ಟಿದ್ದ ಸುಮಾರು 2500 ಕೆಜಿ ಹಸಿ ಕಾಫಿಯಲ್ಲಿ ಅಂದಾಜು 350 ಕೆ.ಜಿ ತೂಕದ ಕಾಫಿಯನ್ನು ಜ.31 ರಂದು ಕಳ್ಳತನ ಮಾಡಿರುವ ಕುರಿತು ದೂರು ದಾಖಲಾಗಿತ್ತು.
ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಮಹೇಶ್ ಕುಮಾರ್.ಎಸ್, ಮಡಿಕೇರಿ ಪಿಐ ಉಮೇಶ್ ಯು, ಪಿಎಸ್‌ಐ ಶ್ರೀನಿವಾಸಲು.ವಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಉಪವಿಭಾಗ ಮಟ್ಟದ ಅಪರಾಧ ತನಿಖಾ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ. ರಶೀದಿ ನೀಡದೆ ಹಾಗೂ ಮಾರಾಟ ಮಾಡುವವರ ಸಂಪೂರ್ಣ ವಿವರವನ್ನು ಇಟ್ಟುಕೊಳ್ಳದೇ ವ್ಯವಹಾರ ನಡೆಸಿದಲ್ಲಿ ಹಾಗೂ ಕಳ್ಳತನ ಮಾಡಿರುವ ಕಾಫಿಯನ್ನು ಖರೀದಿ ಮಾಡಿರುವುದು ಕಂಡು ಬಂದಲ್ಲಿ ಕಾಫಿ ಟ್ರೇಡರ್ಸ್ ಮಾಲೀಕರನ್ನು ನೇರ ಹೊಣಗಾರರನ್ನಾಗಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಎಚ್ಚರಿಕೆ ನೀಡಿದ್ದಾರೆ.









