ಮಡಿಕೇರಿ, ಫೆ.9 : ನಗರಸಭೆಯಲ್ಲಿ ನಾಲ್ಕು ವರ್ಷಗಳಿಂದ ದುಡಿಯುತ್ತಿದ್ದು, ಅನಾರೋಗ್ಯದಿಂದ ಕಾಲು ಕಳೆದುಕೊಂಡ ಹೋಬಳೇಶ್ (ಹೋಬ್ಳಿ) ಅವರಿಗೆ ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ಕೃತಕ ಕಾಲು ಒದಗಿಸಲಾಯಿತು.
ಅಧ್ಯಕ್ಷ ವಸಂತ್ ಕುಮಾರ್ ಹಾಗೂ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಕೃತಕ ಕಾಲನ್ನು ಹಸ್ತಾಂತರಿಸಿದರು.
ಶ್ರಮಜೀವಿ ಹೋಬಳೇಶ್ ಅವರಿಗೆ ಐದು ತಿಂಗಳ ಹಿಂದೆ ಪಾದದ ಬಳಿ ನೋವು ಆರಂಭಗೊಂಡು, ತೊಡೆಯಿಂದ ಕೆಳಗೆ ಒಂದು ಕಾಲು ಕತ್ತರಿಸಬೇಕಾಗಿ ಬಂದಿತ್ತು.
ಈ ಸಂದರ್ಭ ಮಾತನಾಡಿದ ಜಿ.ರಾಜೇಂದ್ರ, ಮಲ್ಲಿಕಾರ್ಜುನ ನಗರದ ಶ್ರೀ ರಾಮ ದೇಗುಲದ ಜಾಗವನ್ನು ಹೋಬಳೇಶ್ ಅವರ ಕುಟುಂಬ ಒದಗಿಸಿದ್ದು, ಕಾಲು ಕಳೆದುಕೊಂಡ ಅವರಿಗೆ ಕೃತಕ ಕಾಲು ನೀಡಲು ಸಾಧ್ಯವೇ ಎಂದು ರೋಟರಿ ಸಂಸ್ಥೆಯನ್ನು ಕೇಳಿದುದಾಗಿ ಹೇಳಿದರು.
ರೋಟರಿ ವುಡ್ಸ್ ಸೇವೆ ಒದಗಿಸಲು ಸದಾ ಸಿದ್ಧವಿದ್ದು, ಸದ್ಯದಲ್ಲೇ ಮತ್ತೊಬ್ಬರಿಗೆ ಗಾಲಿ ಕುರ್ಚಿ ನೀಡಲಿರುವುದಾಗಿ ವಸಂತ್‍ಕುಮಾರ್ ಹೇಳಿದರು.
ರೋಟರಿ ವುಡ್ಸ್ ಸಲಹೆಗಾರ ಬಿ.ಜೆ. ಅನಂತಶಯನ, ಸದಸ್ಯರುಗಳಾದ ರಾಜೇಶ್ ಚೌಧುರಿ, ಝಹೀರ್ ಅಹ್ಮದ್, ಧನಂಜಯ ಶಾಸ್ತ್ರಿ, ಪ್ರವೀಣ್, ರವಿಕುಮಾರ್ ಭಾಗವಹಿಸಿದ್ದರು.









