ಮಡಿಕೇರಿ ಫೆ.13 : ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೂಲಭೂತ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯ್ತಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ಮಡಿಕೇರಿಯ ನಗರಸಭೆ ಮುಂಭಾಗ ಕೆಲಸ ಸ್ಥಗಿತಗೊಳಿಸಿ ಜಮಾಯಿಸಿದ ಸಂಘದ ಪ್ರಮುಖರು ಹಾಗೂ ಹೊರಗುತ್ತಿಗೆ ನೌಕರರು ಬೇಡಿಕೆಯ ಈಡೇರಿಕೆಗಾಗಿ ಒತ್ತಾಯಿಸಿದರು.
ಸಂಘದ ತಾಲ್ಲೂಕು ಅಧ್ಯಕ್ಷ ಅಶೋಕ್ ಮಾತನಾಡಿ, ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆಗಳಲ್ಲಿ ನೂರಾರು ಮಂದಿ ಹೊರಗುತ್ತಿಗೆಯಡಿ, ಚಾಲಕರುಗಳಾಗಿ, ನೀರು ಗಂಟಿಗಳಾಗಿ, ಸ್ವಚ್ಛತಾ ಸಿಬ್ಬಂದಿಗಳಾಗಿ, ಲೋಡರ್ಸ್‍ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರುಗಳನ್ನು ಸರ್ಕಾರ ನೇರ ಪಾವತಿಗೆ ಒಳಪಡಿಸುವ ಮೂಲಕ ಅವರ ವೇತನ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಫೆ.15 ರಂದು ‘ನಮ್ಮ ನಡೆ ಮುಖ್ಯಮಂತ್ರಿಗಳ ಮನೆ ಕಡೆಗೆ’ ಎನ್ನುವ ಹೋರಾಟವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ನೇರ ಪಾವತಿಯ ಪ್ರಮುಖ ಬೇಡಿಕೆ ಹಿನ್ನೆಲೆಯಲ್ಲಿ ನಡೆಯುವ ಪ್ರತಿಭಟನೆ ಸಂದರ್ಭ ರಾಜ್ಯಾದ್ಯಂತ ಹೊರ ಗುತ್ತಿಗೆ ನೌಕರರು ಸ್ವಚ್ಛತಾ ಕಾರ್ಯ ಮತ್ತು ನೀರು ಸರಬರಾಜು ಕೆಲಸವನ್ನು ಸ್ಥಗಿತಗೊಳಿಸಿ ಹೋರಾಟಕ್ಕೆ ಇಳಿಯಲಿದ್ದಾರೆಂದು ಸ್ಪಷ್ಟಪಡಿಸಿದ ಅವರು, ನಮ್ಮ ಬೇಡಿಕೆಗೆ ಸರ್ಕಾರ ಆದ್ಯ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ತರುವ ಅಂಶವನ್ನು ಬಜೆಟ್‍ನಲ್ಲಿ ಘೋಷಿಸಬೇಕೆಂದು ಒತ್ತಾಯಿಸಿದ ಈರಪ್ಪ ಶೆಟ್ಟಿ, ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಅಗತ್ಯಕ್ಕೆ ಅನುಗುಣವಾಗಿ ಪೌರ ಚಾಲಕ ಹುದ್ದೆಗಳನ್ನು ಸೃಷ್ಟಿಸಬೇಕು ಮತ್ತು ಖಾಲಿ ಇರುವ ಪೌರ ಕಾರ್ಮಿಕ ಹುದ್ದೆಗಳ ಭರ್ತಿಯನ್ನು ಬಜೆಟ್‍ನಲ್ಲಿ ಘೋಷಿಸಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಟಿ.ಬಿ. ರಮೇಶ್ ಕುಟ್ಟಪ್ಪ, ಖಜಾಂಚಿ ಅಹಮ್ಮದ್ ಖಬೀರ್, ನೀರು ಸರಬರಾಜು ನೌಕರರ ಜಿಲ್ಲಾಧ್ಯಕ್ಷ ಶಿವಪ್ರಕಾಶ್ ಶೆಟ್ಟಿ ಸೇರಿದಂತೆ ಡಾಟ ಆಪರೇಟರ್‍ಗಳು, ಪೌರಕಾರ್ಮಿಕರು, ವಾಹನ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.