ಮಡಿಕೇರಿ ಫೆ.16 NEWS DESK : ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಸಂಯುಕ್ತ ಹೋರಾಟ-ಕರ್ನಾಟಕ ಹಾಗೂ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿಗಳ ಸಂಯುಕ್ತಶ್ರಯದಲ್ಲಿ ನಗರದ ತಾಲೂಕು ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ಸಿಐಟಿಯು ಸಹಕಾರ್ಯದರ್ಶಿ ಕೆ.ಎಸ್.ರಮೇಶ್ ಮಾತನಾಡಿ, ಎನ್‍ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ವರ್ಷಗಳಾಗಿದ್ದು, ಚುನಾವಣೆಗೂ ಮೊದಲು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ 2 ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ, ಡಾ.ಸ್ವಾಮಿನಾಥನ್ ಅವರ ಶಿಫಾರಸ್ಸಿನಂತೆ ಬೆಂಬಲ ಬೆಲೆಯ ಕಾನೂನು ರಚಿಸುವುದಾಗಿ ತಿಳಿಸಿತ್ತು. ಆದರೆ ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನಗಳನ್ನು ಹೆಚ್ಚಳ ಮಾಡುವ ಬದಲಿಗೆ ಅನುದಾನ ಕಡಿತ ಮಾಡಿ ಆರೋಗ್ಯ ಮತ್ತು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡಲಾಗಿದೆ ಎಂದು ಆರೋಪಿಸಿದರು.
ಭಾರತವನ್ನು ಕಟ್ಟಿರುವ ಸಾರ್ವಜನಿಕ ಕೈಗಾರಿಕೆಗಳನ್ನು ಖಾಸಗೀಕರಣಗೊಳಿಸಿರುವುದಲ್ಲದೇ ಕೋಮುಗಲಭೆಗಳನ್ನು ಪ್ರಚೋದಿಸುವ ವಾತಾವಣವನ್ನು ಸೃಷ್ಟಿಸಲಾಗಿದೆ ಎಂದು ದೂರಿದ ಅವರು, ಸರ್ಕಾರ ಸಂಪೂರ್ಣವಾಗಿ ತನ್ನ ನೀತಿಗಳನ್ನು ಬದಲಾಯಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಬೇಡಿಕೆಗಳು ::
ಪ್ರಜಾಪ್ರಭುತ್ವ, ಗಣತಂತ್ರದ ಸಂವಿಧಾನ ರಕ್ಷಣೆಯಾಗಬೇಕು, ಬಡವರಿಗೆ ಬದುಕಲು ಅವಕಾಶ ನೀಡುವ ನೀತಿಗಳನ್ನು ಜಾರಿಗೆ ತರಬೇಕು, ರೈಲ್ವೆ, ವಿದ್ಯುತ್ ಒಳಗೊಂಡ ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣವನ್ನು ಕೈಬಿಡಬೇಕು, ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು, ಡಾ.ಸ್ವಾಮಿನಾಥನ್ ಶಿಫಾರಸ್ಸಿನಂತೆ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ರಚಿಸಬೇಕು, ಕೃಷಿ ಕಾರ್ಮಿಕರಿಗೆ ಸಮಗ್ರವಾದ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು.
ನರೇಗಾ ಯೋಜನೆಗಳನ್ನು 200 ದಿನಗಳಿಗೆ ಹೆಚ್ಚಿಸಿ, 600 ರೂ. ಕೂಲಿ ನಿಗದಿ ಮಾಡಬೇಕು, ಬಯೋಮೆಟ್ರಿಕ್ ಪದ್ಧತಿಯನ್ನು ಕೈಬಿಡಬೇಕು, ನ್ಯಾಯಯುತ ಜಿಎಸ್‍ಟಿ ಪಾಲನ್ನು ರಾಜ್ಯಗಳಿಗೆ ಕೊಡುವ ಮುಖಾಂತರ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು, ಅಕುಶಲ ಕಾರ್ಮಿಕರಿಗೆ ಕನಿಷ್ಠ ವೇತನ ರೂ.31 ಸಾವಿರ ಹಾಗೂ ಹೆಚ್ಚಿನ ಕೌಶಲ್ಯದ ಹಂತಕ್ಕೆ ಶೇ.15ರಷ್ಟು ಹೆಚ್ಚಿಸಿ ನಿಗದಿಪಡಿಸಬೇಕು, ಬೆಲೆ ಸೂಚ್ಯಾಂಕವನ್ನು ಪ್ರಾಮಾಣಿಕವಾಗಿ ಪ್ರಕಟಿಸಬೇಕು, ಕನಿಷ್ಟ ವೇತನವನ್ನು ನಿಗದಿಪಡಿಸಿ ಸಮರ್ಪಕವಾಗಿ ಜಾರಿಗೊಳಿಸಬೇಕು.
ಗುತ್ತಿಗೆ-ಹೊರಗುತ್ತಿಗೆ ಹಾಗೂ ಹಂಗಾಮಿ ನೌಕರರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಕೊನೆಗಾಣಿಸಬೇಕು, ಗುತ್ತಿಗೆ ಆಧಾರಿತವಾಗಿ ವರ್ಷಗಟ್ಟಲೆಯಿಂದ ದುಡಿಸಿಕೊಳ್ಳುತ್ತಿರುವ ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಖಾಯಂಯಾತಿಗೆ ಶಾಸನ ತರಬೇಕು, ದೇಶದಲ್ಲಿರುವ ಕೋಟ್ಯಾಂತರ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಭಾಗವಾಗಿ ಕನಿಷ್ಠ ಮಾಸಿಕ ಪಿಂಚಣಿ ರೂ.6 ಸಾವಿರ, ಪಿ.ಎಫ್. ಪಿಂಚಣಿ 10 ಸಾವಿರಕ್ಕೆ ಹೆಚ್ಚಿಸಬೇಕು, ಎಲ್ಲಾ ಅಸಂಘಟಿತ ಕಾರ್ಮಿಕರ ಸಮಗ್ರ ಸಾಮಾಜಿಕ ಭದ್ರತೆಗೆ ಜಿಡಿಪಿ ಶೇ.6ನ್ನು ಮೀಸಲಿರಿಸಬೇಕು, ಕೇಂದ್ರ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಕಾನೂನು-1996 ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸೆಸ್ ಕಾನೂನು-1996 ಗಳನ್ನು ಪುನರ್ ಸ್ಥಾಪಿಸಬೇಕು, ಆಹಾರ, ಆರೋಗ್ಯ, ಶಿಕ್ಷಣ ಮತ್ತು ಪೌಷ್ಠಿಕ ಆಹಾರಕ್ಕಾಗಿರುವ ಯೋಜನೆಗಳಾದ ICDS, MDM, NHM, ICPS, SSA, MNREG ಮುಂತಾದ ಯೋಜನೆಗಳನ್ನು ಖಾಯಂ ಮಾಡುವ ಮುಖಾಂತರ ಈ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು.
3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡಲು ಕಾನೂನು ರೂಪಿಸಬೇಕು, 49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು 20 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ 31 ಸಾವಿರ ರೂ. ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕನಿಷ್ಟ 10 ಸಾವಿರ ರೂ. ಪಿಂಚಣಿ ಕೊಡಬೇಕು, 29 ಕಾರ್ಮಿಕ ಕಾನೂನುಗಳ ಸಂಹಿತೆಗಳಾಗಿ ಮಾಡಿರುವುದನ್ನು ಕೈಬಿಟ್ಟು ಕಾರ್ಮಿಕ ಪರವಾದ ನೀತಿಗಳನ್ನು ಜಾರಿ ಮಾಡಬೇಕು, ಬರ ಪೀಡಿತ ಕರ್ನಾಟಕದ ರೈತರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಒತ್ತಾಯಿಸಿದರು.
ಸಿಐಟಿಯ ಜಂಟಿ ಕಾರ್ಯದರ್ಶಿ ರಾಚಪ್ಪಾಜಿ, ಸಾಜಿ ರಮೇಶ್, ಮಡಿಕೇರಿ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸರೋಜಾ, ಕಾರ್ಯದರ್ಶಿ ಇಂದಿರಾ, ಖಜಾಂಚಿ ಉಮಾವತಿ, ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಜಾನಕಿ ಸೇರಿದಂತೆ ಆಶಾ ಕಾರ್ಯಕರ್ತರು, ಸ್ವಚ್ಛತಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.









