ಸೋಮವಾರಪೇಟೆ ಫೆ.16 NEWS DESK: ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೂವರೆ ಎಕರೆಯಷ್ಟು ಕಾಫಿ ತೋಟ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಸೋಮವಾರಪೇಟೆಯ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷಿಕ ಬಿ.ಬಿ.ಕರುಂಬಯ್ಯ ಎಂಬವರು ಕೃಷಿ ಮಾಡಿದ 8 ವರ್ಷದ ಅರೇಬಿಕಾ ಕಾಫಿ ಗಿಡ, ಒಂದು ಸಾವಿರ ಕಾಳುಮೆಣಸು ಬಳ್ಳಿಗಳು, 500 ರಷ್ಟು ಕಿತ್ತಳೆ ಮರಗಳು, 150 ಬಾಳೆಗಿಡಗಳು ಸಂಪೂರ್ಣ ಸುಟ್ಟುಹೋಗಿದ್ದು, 15 ಲಕ್ಷ ರೂ.ನಷ್ಟು ಹಾನಿಯಾಗಿದೆ. ಕೂಡಲೇ ಪರಿಹಾರ ನೀಡಬೇಕೆಂದು ತಹಸೀಲ್ದಾರ್ ಮತ್ತು ಸೆಸ್ಕ್ ಇಲಾಖೆಗೆ ತೋಟದ ಮಾಲೀಕ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಸೆಸ್ಕ್ ನ ಇ.ಇ. ಅಮಿತ್, ಎಇಇ ಮಂಜುನಾಥ್, ರವಿ, ಜೆಇ ಕುಮಾರ್ ಅವರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರತಿವರ್ಷ ಟ್ರಾನ್ಸ್ಫಾರಂ ನಲ್ಲಿ ತಂತಿಗಳು ಸ್ಪರ್ಶಗೊಂಡು ಬೆಂಕಿ ಹತ್ತಿಕೊಂಡು ಅಲ್ಪಸ್ವಲ್ಪ ಹಾನಿಯಾಗುತ್ತಿದ್ದು, ಟ್ರಾನ್ಸ್ ಫಾರ್ಮರ್ ಸರಿಪಡಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮಕೈಗೊಂಡಿರುವುದಿಲ್ಲ. ಅವರ ನಿರ್ಲಕ್ಷ್ಯದಿಂದ ದೊಡ್ಡಮಟ್ಟದ ಹಾನಿಯಾಗಿದೆ ಎಂದು ಕೃಷಿಕ ಕರುಂಬಯ್ಯ ದೂರಿದರು.










