ಮಡಿಕೇರಿ ಫೆ.28 NEWS DESK : ಈಗಾಗಲೇ ಬಾಂಗ್ಲಾ ದೇಶದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಲ್ರ್ಡ್ ಪ್ರೀಮಿಯರ್ ಕಂಡು ಹೆಸರು ಮಾಡಿರುವ ಕೂರ್ಗ್ ಕಾಫಿ ವುಡ್ ಮೂವಿಸ್ನ ಬ್ಯಾನರ್ ಅಡಿಯಲ್ಲಿ ತಯಾರಾದ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ಬೇರ್” (The Root) ಕೊಡವ ಸಿನಿಮಾ ಇದೀಗ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಇದೇ ಫೆ.29 ರಿಂದ ಮಾರ್ಚ್ 7ರವರೆಗೆ ಬೆಂಗಳೂರಿನ ಒರಿಯಾನ್ ಮಾಲ್ನಲ್ಲಿ ನಡೆಯುವ ಚಲನಚಿತ್ರೋತ್ಸವದ Unsung Incredible India ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ. ಇದು ಕೊಡವ ಸಿನಿಮಾ ರಂಗದಲ್ಲಿ ಬಹುದೊಡ್ಡ ಸಾಧನೆಯಾಗಿದೆ ಎಂದು ಚಿತ್ರತಂಡ ಹರ್ಷವ್ಯಕ್ತಪಡಿಸಿದೆ.
ಇದಕ್ಕೂ ಮೊದಲು ನಡೆದ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ವಿವಿಧ ವಿಭಾಗಗಳಲ್ಲಿ ಆಯ್ಕೆಗೊಂಡು ಪ್ರಶಸ್ತಿಗಳನ್ನು ಪಡೆದ ಕೊಡವ ಮತ್ತು ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರ ನಿರ್ಮಾಣ, ನಿರ್ದೇಶನದಲ್ಲಿ “ಬೇರ್” ಕೊಡವ ಸಿನಿಮಾ ಮೂಡಿ ಬಂದಿದೆ.
ವಿದೇಶದಲ್ಲಿ ಪ್ರದರ್ಶನ ಕಂಡ ಮೊದಲ ಕೊಡವ ಸಿನಿಮಾ ಹೆಗ್ಗಳಿಗೆ ಪ್ರಕಾಶ್ ಕಾರ್ಯಪ್ಪ ಅವರಿಗೆ ಸಲ್ಲುತ್ತದೆ. ಇವರು ಮಾಡಿದ ಎಲ್ಲಾ ಸಿನಿಮಾಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದೆ. ಕೊಡವ ಭಾಷೆ, ಆಚಾರ, ವಿಚಾರ ಹಾಗೂ ಪರಿಸರವನ್ನು ಯುವ ಪಿಳಿಗೆಗೆ ಸಿನಿಮಾದ ಮೂಲಕ ಪರಿಚಯಿಸುವುದರ ಜೊತೆಗೆ ಸಿನಿಮಾದ ಗೆಲುವಿಗೆ ಶ್ರಮಿಸುತ್ತಿದ್ದಾರೆ.
ಪ್ರಪ್ರಥಮ ಬಾರಿಗೆ ಇಂಟಲೆಕ್ಚುವಲ್ ಕೊಡವ ಸಿನಿಮಾವಾಗಿದ್ದು, ಕೆಲವೇ ಪಾತ್ರದಾರಿಗಳ ನಟನೆ ಈ ಸಿನಿಮಾದಲ್ಲಿದೆ. ತಮ್ಮದಲ್ಲದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಆಗುವ ಅನಾಹುತಗಳ ಬಗ್ಗೆ ಯುವ ಪೀಳಿಗೆಗೆ ಸಂದೇಶವನ್ನು ನೀಡುವ ವಿಭಿನ್ನ ಕಥಾಹಂದರವನ್ನು “ಬೇರ್” (The Root) ಕೊಡವ ಸಿನಿಮಾ ಹೊಂದಿದೆ.
ಚಿತ್ರದಲ್ಲಿ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ವಾಂಚೀರ ವಿಠಲ್ ನಾಣಯ್ಯ, ಮಂಡೀರ ಪದ್ಮ ಬೋಪಯ್ಯ, ಮೊಣ್ಣಂಡ ನೇಹ ಮೋಟಯ್ಯ, ಉಳುವಂಗಡ ಅಮಿತ್ ಬೋಪಣ್ಣ, ಗುಮ್ಮಟ್ಟಿರ ಕಿಶು ಉತ್ತಪ್ಪ ಹಾಗೂ ತೊರೇರ ಕವನ, ಬಾಲನಟರಾಗಿ ತೇಜಲ್ ಕಾರ್ಯಪ್ಪ ಹಾಗೂ ತನಮ್ ಕಾರ್ಯಪ್ಪ ನಟಿಸಿದ್ದಾರೆ.
ಈರಮಂಡ ಹರಿಣಿ ವಿಜಯ್ ಮತ್ತು ಇತಿಹಾಸ ಶಂಕರ್ ಸಹ ನಿರ್ದೇಶಕರಾಗಿ, ಶಿವಕುಮಾರ್ ಅಂಬಲಿ ಹಾಗೂ ಸಂತೋಷ ಬಪ್ಪು ಛಾಯಾಗ್ರಾಹಕರಾಗಿ, ಪ್ರದೀಪ್ ಆರ್ಯನ್ ಸಂಕಲನಕಾರರಾಗಿ ಮತ್ತು ವಿಠಲ್ ರಂಗದೊಳ್ ಸಂಗೀತ ನಿರ್ದೇಶಕರಾಗಿ, ಕಲರಿಂಗ್ ನಿಕಿಲ್ ಕಾರ್ಯಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಈರಮಂಡ ವಿಜಯ್ ಉತ್ತಯ್ಯ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಥಮ ಬಾರಿಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕೊಡಗಿನ ಒಂದೇ ಕುಟಂಬದ ಪತಿ ಪತ್ನಿಯರ ಕೊಡವ ಹಾಗೂ ಕನ್ನಡ ಸಿನಿಮಾ ಆಯ್ಕೆಯಾಗಿರುವುದು ಹೆಗ್ಗಳಿಗೆಯ ವಿಷಯವಾಗಿದ್ದು, ಇವರ ಸಾಧನೆಗೆ ಚಲನಚಿತ್ರದ ಅನೇಕ ನಟ ಹಾಗೂ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.