ವಿರಾಜಪೇಟೆ ಮಾ.2 NEWS DESK : ವಿರಾಜಪೇಟೆ ಚಿಕ್ಕಪೇಟೆಯಲ್ಲಿರುವ ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಎಸ್.ಲಾಲ್ ಕುಮಾರ್ ಅವರಿಗೆ ಶಾಲಾ ಆಡಳಿತ ಮಂಡಳಿ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪ್ರಮುಖರು ಹಾಗೂ ಶಿಕ್ಷಕರು ಫಲ, ತಂಬೂಲ ನೀಡಿ ಸನ್ಮಾನಿಸಿ ಬೀಳ್ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಯಪ್ರಕಾಶ್ ನಾರಾಯಣ ಪ್ರೌಢಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ತ್ರಿಶು ಗಣಪತಿ ಲಾಲ್ ಕುಮಾರ್ ಅವರು ಮುಖ್ಯ ಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ಉತ್ತಮ ಪ್ರೀತಿ, ವಾತ್ಸಲ್ಯದಿಂದ ಕಾಣುತ್ತ ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ಭಾಗವಹಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದರು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಮಾತನಾಡಿ, ಲಾಲ್ ಕುಮಾರ್ ಅವರ ಸೇವೆ ವಿದ್ಯಾರ್ಥಿಗಳಿಗೆ ಅವಶ್ಯವಾಗಿದ್ದು, ಈ ಅನುದಾನಿತ ಶಾಲೆಗೆ 2021-22 ರಲ್ಲಿ ಇವರ ಅವಧಿಯಲ್ಲಿ ಸ್ವಚ್ಚ ವಿದ್ಯಾಲಯ ಎಂಬ ಪುರಸ್ಕಾರ ದೊರಕಿದ್ದು ಶ್ಲಾಘಿಸಿಯ ಎಂದರು.
ಸನ್ಮಾನ ಸ್ವಿಕರಿಸಿದ ಲಾಲ್ಕುಮಾರ್ ಮಾತನಾಡಿ ಶಿಕ್ಷಕ ವೃತ್ತಿಯಲ್ಲಿ ಸಾಗಿಬಂದ ಹಾದಿಯ ಬಗ್ಗೆ ನೆನಪಿಸಿಕೊಂಡರು.
ವೇದಿಕೆಯಲ್ಲಿ ಲಾಲ್ಕುಮಾರ್ ಅವರ ಪತ್ನಿ ಗೀತಾ ಲಾಲ್ ಕುಮಾರ್, ಶಾಲಾ ಆಡಳಿತ ಮಂಡಳಿ ನಿರ್ದೇಶಕ ಎಂ.ಎಂ.ಉತ್ತಪ್ಪ, ಆಶಾ ಸುಬ್ಬಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ಸಂಪನ್ಮೂಲ ವ್ಯಕ್ತಿ ಕೆ.ಸಿ.ಗೀತಾಂಜಲಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಗಾಯತ್ರಿ, ಹಳೆ ವಿದ್ಯಾರ್ಥಿ ನೀತು, ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಮುಖ್ಯ ಶಿಕ್ಷಕ ರಾಜೇಗೌಡ ಸ್ವಾಗತಿಸಿದರು. ಶಿಕ್ಷಕಿ ಕವಿತಾ ನಿರೂಪಿಸಿದರು. ನಂದೀಶ್ ವಂದಿಸಿದರು.




































