ಕುಶಾಲನಗರ, ಮಾ.4 NEWS DESK : ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ
ಕುಶಾಲನಗರ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ:2024 ರ ಅಂಗವಾಗಿ ಶಾಲೆಯ ವಿಜ್ಞಾನ ಸಂಘ, ಇಕೋ ಕ್ಲಬ್, ಗಣಿತ ಸಂಘ, ಕಲಾ ಸಂಘ, ಎನ್.ಎಸ್.ಎಸ್.ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ
ನಡೆದ ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನದ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಹಬ್ಬ ಗಮನ ಸೆಳೆಯಿತು.
ವಿದ್ಯಾರ್ಥಿಗಳು ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಿಂದ ತಯಾರಿಸಿದ ವಿಜ್ಞಾನ, ಗಣಿತ ಹಾಗೂ ಕಲೆಗೆ ಸಂಬಂಧಿಸಿದ ವಸ್ತುಗಳು ಮಕ್ಕಳ ಸೃಜನಶೀಲತೆಗೆ ಸೂಕ್ತ ವೇದಿಕೆ ಒದಗಿಸಿತು.
ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಹಬ್ಬಕ್ಕೆ ಚಾಲನೆ ನೀಡಿದ ರೋಟರಿ ಸಂಸ್ಥೆಯ ಅಧ್ಯಕ್ಷೆ ಸುನಿತಾ ಮಹೇಶ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಹಾಗೂ ಸಮಾಜ ವಿಷಯಗಳ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.
ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಬೆಳೆಸಲು ಸೂಕ್ತ ವೇದಿಕೆ ಒದಗಿಸುತ್ತವೆ. ಮಕ್ಕಳ ವಸ್ತು ಪ್ರದರ್ಶನದ ಕುರಿತು ಶ್ಲಾಘಿಸಿದ ಅವರು, ಇಂತಹ ಪ್ರದರ್ಶನಗಳು ಮಕ್ಕಳ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಎತ್ತಿ ತೋರಿಸುತ್ತದೆ. ಪಾಲಕರು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ವಿಜ್ಞಾನ ನಮ್ಮ ಬದುಕಿನಲ್ಲಿ ಎಲ್ಲರಿಗೂ ಅಗತ್ಯವಾಗಿದೆ.
ಭಾರತವು ವಿಶ್ವಮಟ್ಟದಲ್ಲಿ ವಿಜ್ಞಾನದ ಪ್ರಗತಿಗೆ ತನ್ನದೇ ಆದ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ. ದೇಶೀಯ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ ಬೆಳೆಸಿಕೊಂಡು ತರ್ಕಬದ್ಧ ಮತ್ತು ತಾರ್ಕಿಕ ಮನಸ್ಥಿತಿ ಬೆಳೆಸಿಕೊಂಡು ಸಮಾಜದಲ್ಲಿನ ಮೂಢನಂಬಿಕೆಗಳ ವಿರುದ್ಧ ಹೋರಾಡಬೇಕು ಎಂದರು.
ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವರ್ನರ್ ಮಹೇಶ್ ನಲ್ವಾಡಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿರುವುದರಿಂದ ಭಾರತ ದೇಶವು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಹಾಗೂ ಕಲಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಕಲಿಯುತ್ತಾ ಹೋದರೆ ತಮ್ಮ ಜ್ಞಾನ ವೃದ್ಧಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, ಭವಿಷ್ಯದ ಪೀಳಿಗೆಯನ್ನು ವೈಜ್ಞಾನಿಕ ಕ್ಷೇತ್ರದಲ್ಲಿ ತೊಡಗಲು ಹೆಚ್ಚಿನ ಪ್ರೇರೇಪಣೆ ನೀಡುತ್ತದೆ.
ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ ಕುರಿತು ಮಾತನಾಡಿದ ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಸರ್ ಸಿ.ವಿ.ರಾಮನ್ ಅವರ ರಾಮನ್ ಎಫೆಕ್ಟ್ ಕುರಿತು ವಿವರಿಸಿದರು. ದೇಶದ ಅಭಿವೃದ್ಧಿಗೆ ಭಾರತೀಯ ವಿಜ್ಞಾನಿಗಳ ಕೊಡುಗೆಯನ್ನು ಗುರುತಿಸಲು ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್ ಮಾತನಾಡಿ, ಮಕ್ಕಳ ಇಂತಹ ಸ್ಪರ್ಧೆಗಳು ಅವರ ಪ್ರತಿಭೆ, ಸೃಜನಶೀಲತೆಯನ್ನು ಎತ್ತಿ ತೋರಿಸುತ್ತಿವೆ ಎಂದರು.
ಗಣಿತ ಸಂಘದ ಶಿಕ್ಷಕಿ ಬಿ.ಎನ್.ಸುಜಾತ,ಸಮಾಜ ಸಂಘದ ಶಿಕ್ಷಕಿ ಎಸ್.ಎಂ.ಗೀತಾ ಮಕ್ಕಳು ಪ್ರದರ್ಶಿಸಿದ ಮಾದರಿಗಳ ಕುರಿತು ವಿವರಣೆ ನೀಡಿದರು.
ರೋಟರಿ ಕಾರ್ಯದರ್ಶಿ ಶರ್ಲಿ ಸಂತೋಷ ಮಾತನಾಡಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷ ಎ.ಎಂ.ಜವರಯ್ಯ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ.ಸದಸ್ಯರಾದ ಎಂ.ರಂಗಸ್ವಾಮಿ, ಹೇಮಾವತಿ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಕೆ.ಟಿ.ಸೌಮ್ಯ, ಸಿಬ್ಬಂದಿ ಎಂ.ಉಷಾ , ವಿದ್ಯಾರ್ಥಿಗಳು ಇದ್ದರು. ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮಕ್ಕಳು ವಸ್ತು ಪ್ರದರ್ಶನ ವೀಕ್ಷಿಸಿದರು.
ವಿಜ್ಞಾನ, ಗಣಿತ ಹಾಗೂ ಕಲಾ ವಸ್ತು ಪ್ರದರ್ಶನ: ಗಮನ ಸೆಳೆದ ಮಕ್ಕಳ ಮಾದರಿಗಳು: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರೌಢಶಾಲಾ ಮಕ್ಕಳು ಕಡಿಮೆ ವೆಚ್ಚದ ಹಾಗೂ ಅನುಪಯುಕ್ತ ವಸ್ತುಗಳಿಂದ ಸ್ವತಃ ತಯಾರಿಸಿದ ವಿಜ್ಞಾನದ ವಿವಿಧ ಮಾದರಿಗಳು ಹಾಗೂ ಪ್ರದರ್ಶಿಸಿದ ವಿಜ್ಞಾನ ಪ್ರಯೋಗಗಳು ಪೋಷಕರ ಮೆಚ್ಚುಗೆಗೆ ಪಾತ್ರವಾದವು.
ಸ್ವಚ್ಛ ಗ್ರಾಮ ಆರೋಗ್ಯ ಧಾಮ, ಮಳೆನೀರು ಕೊಯ್ಲು, ಕೃಷಿಯಂತ್ರ, ಚಂದ್ರಯಾನ- 3 ರ ಮಾದರಿ, ಖಗೋಳ ವಿಜ್ಞಾನ ಮತ್ತು
ಸೌರವ್ಯೂಹ ವ್ಯವಸ್ಥೆ, ಗಣಿತದಲ್ಲಿ ಗಣಿತಜ್ಞ ರಾಮಾನುಜನ್ ರ ಸಾಧನೆಗಳು ಮತ್ತು ವಿವಿಧ ಮಾದರಿಗಳು, ಕಲಾ ವಿಭಾಗ ಹಾಗೂ ಭೂಗೋಳಕ್ಕೆ ಸಂಬಂಧಿಸಿದಂತೆ ತಯಾರಿಸಿದ್ದ ಸೌರವ್ಯೂಹ ವ್ಯವಸ್ಥೆ, ಜ್ವಾಲಾಮುಖಿ, ವಿವಿಧ ಮಾದರಿಗಳು ಮಕ್ಕಳ ವೈಜ್ಞಾನಿಕ ಕುತೂಹಲವನ್ನು ತಣಿಸಲು ಸಾಧ್ಯವಾಯಿತು.