ಸೋಮವಾರಪೇಟೆ ಮಾ.5 NEWS DESK : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಚನ್ನಬಸಪ್ಪ ಸಭಾಂಗಣದಲ್ಲಿ 3 ದಿನಗಳ ಕಾಲ ಆಯೋಜಿಸಿರುವ ‘ಮಕ್ಕಳ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮಕ್ಕೆ ಚೌಡ್ಲು ಗ್ರಾ.ಪಂ ಅಧ್ಯಕ್ಷೆ ಗೀತಾ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಮಕ್ಕಳಲ್ಲಿ ಸುಪ್ತವಾಗಿರುವ ಕಲಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಇದೊಂದು ಕಲಿಕೆಗೆ ಪೂರಕ ಕಾರ್ಯಕ್ರಮವಾಗಿದೆ. ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪೋಷಕರು ಪ್ರೋತ್ಸಾಹ ನೀಡಬೇಕಾಗಿದೆ. ಚಿಕ್ಕಂದಿನಿಂದಲೇ ಮಕ್ಕಳು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯರಾದ ಸೌಭಾಗ್ಯ ಬೇಲೂರು ಅವರು ಮಾತನಾಡಿ, ಸಾಹಿತ್ಯಾಭಿರುಚಿಯನ್ನು ಬೆಳೆಸಿ, ಗ್ರಂಥಾಲಯದ ಕಡೆಗೆ ಮಕ್ಕಳನ್ನು ಸೆಳೆಯುವುದೆ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ರಾಜ್ಯದ ಆರು ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಆದರೆ ಓದುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದನ್ನು ಮನಗಂಡ ಇಲಾಖೆ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ರಾಜ್ಯದ 75 ತಾಲ್ಲೂಕುಗಳಲ್ಲಿ ಹಮ್ಮಿಕೊಂಡಿದೆ ಎಂದರು.
ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಒಟ್ಟು 8 ಸಾವಿರ ಮಕ್ಕಳು ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂದಿನ ವರ್ಷ ರಾಜ್ಯ ಎಲ್ಲಾ ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಈ ಬಾರಿ ವಿದ್ಯಾರ್ಥಿಗಳು ರಜೆ ದಿನಗಳಲ್ಲಿ ಗ್ರಾಮ ಪಂಚಾಯಿತಿಯಲ್ಲಿರುವ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಿಇಒ ಭಾಗ್ಯಮ್ಮ, ಚೌಡ್ಲು ಗ್ರಾ.ಪಂ ಸದಸ್ಯೆ ಮಂಜುಳಾ ಸುಬ್ರಮಣಿ, ಸಂಪನ್ಮೂಲ ವ್ಯಕ್ತಿಗಳಾದ ಸುಮನ ಮ್ಯಾಥ್ಯೂ, ಪವನ್ ಕುಮಾರ್, ಗೌತಮ್ ಕಿರಗಂದೂರು, ಶರ್ಮಿಳಾ ರಮೇಶ್, ಪಿ.ಬಿ.ಪೊನ್ನಪ್ಪ, ಹೇಮಂತ್ ಪಾರೇರ ಮತ್ತಿತರರು ಇದ್ದರು.
ಮಕ್ಕಳ ಸಾಹಿತ್ಯ ಸಂಭ್ರಮದ ಭಾಗವಾದ ಕವಿತೆ ಬರೆಯೋಣ, ಕಥೆ ಕಟ್ಟೋಣ, ನಾಟಕ ಮಾಡೋಣ, ನಾನು ರಿಪೋರ್ಟರ್, ನಾಲ್ಕು ತಂಡಗಳಲ್ಲಿ ತಲಾ 25 ಮಕ್ಕಳನ್ನು ಸೇರಿಸಿ, ಕಥೆ, ಕವಿತೆ, ನಾಟಕ, ವಿಭಾಗದಲ್ಲಿ ತರಬೇತಿಯನ್ನು ನೀಡಲಾಯಿತು.
ನಾನು ರಿಪೋರ್ಟರ್ ವಿಭಾಗದ ಕ್ಷೇತ್ರ ಭೇಟಿಯಲ್ಲಿ ಸೋಮವಾರಪೇಟೆ ಕಾಫಿ ಮಂಡಳಿಯ ಕಿರಿಯ ಸಹಾಯಕ ಅಧಿಕಾರಿ ರಂಜಿತ್ ಕುಮಾರ್, ವಿದ್ಯಾರ್ಥಿಗಳಿಗೆ ಕಾಫಿ ಬೆಳೆಯ ಬಗ್ಗೆ ಮಾಹಿತಿ ನೀಡಿದರು. ಸೋಮವಾರಪೇಟೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಎಂ.ಬಿ.ಪ್ರದೀಪ್ ಬ್ಯಾಂಕಿನ ಬಗ್ಗೆ ಮಾಹಿತಿಯನ್ನು ನೀಡಿದರು.
ಸಂದರ್ಶನ ವಿಭಾಗದಲ್ಲಿ ಆಟೋ ಚಾಲಕಿ ಪ್ರಮೀಳಾ ಮಕ್ಕಳಿಗೆ ಆತ್ಮವಿಶ್ವಾಸ ಮತ್ತು ಧೈರ್ಯದ ಬಗ್ಗೆ ತಿಳಿಸಿಕೊಟ್ಟರು.
ಮಕ್ಕಳು ಕಥೆ, ಕವನ, ನಾಟಕ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡು ಸಂಭ್ರಮಿಸಿದರು.