ಮಡಿಕೇರಿ ಮಾ.9 NEWS DESK : ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಾಣ ಮತ್ತು ನಿರ್ದೇಶನ ದ ಕನ್ನಡ ಚಲನಚಿತ್ರ “ಕಂದೀಲು” (The Ray of hope) ಬೆಂಗಳೂರಿನ ಒರಿಯನ್ ಮಾಲ್ ನಲ್ಲಿ ನಡೆದ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗದಲ್ಲಿ ಆಯ್ಕೆಗೊಂಡು 12 ಸಿನಿಮಾಗಳಲ್ಲಿ ಸ್ಥಾನ ಪಡೆದುಕೊಂಡು ಅಂತಿಮ ಘಟ್ಟದಲ್ಲಿ “2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ” ಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಬೆಂಗಳೂರಿನ ವಿಧಾನಸೌಧ ದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಅದ್ದೂರಿ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡದ ಖ್ಯಾತ ನಟ, ಚಲನಚಿತ್ರೋತ್ಸವದ ರಾಯಭಾರಿ ಡಾಲಿ ಧನಂಜಯ ಹಾಗೂ ಕನ್ನಡ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ಖ್ಯಾತ ಸಂಗೀತ ನಿರ್ದೇಶಕ ಸಾಧು ಕೋಕಿಲ ಮತ್ತು ಹಿರಿಯ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರಿಂದ “ಕಂದೀಲು” ಚಿತ್ರದ ನಿರ್ದೇಶಕಿ ಹಾಗೂ ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಪತಿ ಪ್ರಕಾಶ್ ಕಾರ್ಯಪ್ಪ ಹಾಗೂ ಕ್ಯಾಮರಾಮೆನ್ ಪಿ.ವಿ.ಆರ್ ಸ್ವಾಮಿ ಅವರೊಂದಿಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಮತ್ತು ಚಿತ್ರೋತ್ಸವ ಸಮಿತಿ ಅಧ್ಯಕ್ಷ ಡಾ.ತ್ರಿಲೋಕ್ ಚಂದ್ರ ಐಎಎಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್, ಖ್ಯಾತ ನಟ ಜೈ ಜಗದೀಶ್, ನಟಿಯರಾದ ಭಾವನಾ, ಪೂಜಾ ಗಾಂಧಿ, ಭವ್ಯ ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಹಿರಿಯ ನಿರ್ದೇಶಕ ಪದ್ಮಶ್ರೀ ಎಂ.ಎಸ್.ಸತ್ಯು ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭ ಚಿತ್ರದ ನಾಯಕ ನಟ ಪ್ರಭಾಕರ್ ಬಿ.ಕುಂದರ್, ನಟಿ ಈರಮಂಡ ಹರಿಣಿ ವಿಜಯ್ ಉತ್ತಯ್ಯ, ಕಥೆ-ಸಂಕಲನಕಾರ ನಾಗೇಶ್ ಹಾಗೂ ವಿಜಯ್ ಉತ್ತಯ್ಯ ಹಾಜರಿದ್ದರು.
ಚಿತ್ರದಲ್ಲಿ ಬಡ ರೈತ ಕುಟುಂಬ ತನ್ನ ಹೆಂಡತಿ, ಮಗ ಮಗಳೊಂದಿಗೆ ತನ್ನ ಬರಡು ಭೂಮಿಯಲ್ಲಿ ಕೃಷಿ ಮಾಡುವ ಕನಸನ್ನು ಈಡೇರಿಸಲು ಮಗ ನನ್ನು ಸಾಲ ಮಾಡಿ ದೂರದ ದುಬೈ ಗೆ ಕೆಲಸಕ್ಕೆ ಕಳುಹಿಸಿ ತನ್ನ ಊರಿನಲ್ಲಿ ರಾಜಕಾರಣಿ ಹಾಗೂ ಉದ್ಯಮಿ ಗಳಿಂದ ಪಡ ಬಾರದ ಕಷ್ಟ ಅನುಭವಿಸುವ ಕುಟುಂಬ, ದುಬೈಯಲ್ಲಿ ಮೃತಪಟ್ಟ ಮಗನನ್ನು ಭಾರತಕ್ಕೆ ಕರೆ ತರಲು ಪಡುವ ಕಷ್ಟ, ಇವುಗಳ ನಡುವೆ ಊರಿನಲ್ಲಿನ ಕಟ್ಟುಪಾಡುಗಳು, ಊರಿನ ಜನರ ಅವ ಹೇಳನಕಾರಿ ಮಾತುಗಳು ಇವೆಲ್ಲವನ್ನು ಅತ್ಯಂತ ಭಾವನಾತ್ಮಕ, ನೈಜತೆ ಯಿಂದ ಮತ್ತು ಮನೋಜ್ಞವಾಗಿ ಚಿತ್ರಿಸಿರುವ ಬಗ್ಗೆ ತೀರ್ಪುಗಾರರು ಹಾಗೂ ಸಿನಿ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂತಾರ ಖ್ಯಾತಿಯ ಪ್ರಭಾಕರ್ ಕುಂದರ್ ಬಡ ರೈತ ತಂದೆ ಪಾತ್ರದಲ್ಲಿ, ಮೈಸೂರಿನ ವನಿತಾ ರಾಜೇಶ್ ತಾಯಿಯ ಪಾತ್ರ, ಮಗನ ಪಾತ್ರದಲ್ಲಿ ಗುರು ತೇಜಸ್, ಮಗಳ ಪಾತ್ರದಲ್ಲಿ ಕನ್ನಡ ಮತ್ತು ಕೊಡವ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಕೊಡಗಿನ ಬಾಲನಟಿ ಈರಮಂಡ ಕುಶಿ ಕಾವೇರಮ್ಮ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ, ಉಳಿದಂತೆ ವೆಂಕಟೇಶ್ ಪ್ರಸಾದ್, ಚಂದ್ರಕಾಂತ್ ಕೋಟಪಾಡಿ, ಹರಿಣಿ ವಿಜಯ್, ಬಸವರಾಜು, ಆಡುಗುಡಿ ಶ್ರೀನಿವಾಸ್, ಮಂಜುನಾಥ್, ರತ್ನ ಕುಮಾರಿ, ಬಂಗಾರುಪೇಟೆ ಮುದುವಾಡಿ, ರೋಹಿಣಿ ರವರುಗಳು ನಟಿಸಿದ್ದಾರೆ.
ಕೊಡಗಿನವರಾದ ಕೊಟ್ಟೂಕತ್ತಿರ ಯಶೋಧ ಪ್ರಕಾಶ್ ಅವರ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬಂದ ಕಂದೀಲು. 29ನೇ ಕಲ್ಕತ್ತಾ ಹಾಗೂ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಯ್ಕೆಗೊಂಡು ಪ್ರಶಸ್ತಿ ದೊರಕಿರುವುದು ಹೆಮ್ಮೆಯ ವಿಚಾರ. ಜನರಿಗೆ ಸಾಮಾಜಿಕ ಸಂದೇಶ, ಉತ್ತಮ ಸದಾಭಿರುಚಿಯ ಸಿನಿಮಾಗಳನ್ನು ನಿರ್ಮಿಸಿ ಜನರಿಗೆ ತಲುಪಿಸುವ ಜವಾಬ್ದಾರಿ ಹೆಚ್ಚಾಗಿದೆ ಎಂದು ನಿರ್ದೇಶಕಿ ಹಾಗೂ ನಿರ್ಮಾಪಕಿ ಯಶೋಧ ಪ್ರಕಾಶ್ ಹಾಗೂ ಚಿತ್ರ ತಂಡ ಸಂತಸವನ್ನು ವ್ಯಕ್ತ ಪಡಿಸಿದೆ.









