ಮಡಿಕೇರಿ ಮಾ.13 NEWS DESK : ಕೊಡಗಿನ ಗಡಿ ಗ್ರಾಮ ಕರಿಕೆಯ ಕೆಲವು ಭಾಗದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರುತ್ತಿದ್ದು, ಇದು ಕೇರಳದ ತ್ಯಾಜ್ಯವೆಂದು ಸ್ಥಳೀಯ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ಲಾಸ್ಟಿಕ್ ಮತ್ತು ಮಾಂಸದ ತ್ಯಾಜ್ಯಗಳು, ಮಾರಾಟವಾಗದ ಹಳೆಯ ಆಹಾರ ಪದಾರ್ಥಗಳು ಸೇರಿದಂತೆ ನಿಷ್ಪ್ರಯೋಜಕ ವಸ್ತುಗಳನ್ನು ಚೆಂಬೇರಿ ಗ್ರಾಮ ವ್ಯಾಪ್ತಿಯ ಸುತ್ತಮುತ್ತ ಸುರಿಯಲಾಗಿದೆ. ಕೇರಳದ ವ್ಯಕ್ತಿಗಳು ಮಾತ್ರವಲ್ಲದೆ ಅಕ್ಕಪಕ್ಕದ ಗ್ರಾಮದವರೂ ಕಸ ತಂದು ಹಾಕುತ್ತಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ಕಸ ವಿಲೇವಾರಿ ಘಟಕವಿದ್ದರೂ ನಿಷ್ಪ್ರಯೋಜಕವಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ಇರುವುದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ಅಡಚಣೆಯಾಗಿದೆ. ಈ ಬಗ್ಗೆ ಹಲವು ಬಾರಿ ಗ್ರಾ.ಪಂ ಗೆ ದೂರು ನೀಡಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಕರಿಕೆ- ಕೇರಳ ಗಡಿಯಲ್ಲಿ ಸಿಸಿ ಕ್ಯಾಮರಾಗಳಿದ್ದರೂ ಕಸ ತಂದು ಹಾಕುತ್ತಿರುವವರನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹಿರಿಯ ಅಧಿಕಾರಿಗಳು ಕಸದ ಸಮಸ್ಯೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.









