ಸೋಮವಾರಪೇಟೆ ಮಾ.20 NEWS DESK : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅತ್ಯಗತ್ಯ, ಧೈರ್ಯದಿಂದ ಒತ್ತಡ ಮುಕ್ತವಾಗಿ ಪರೀಕ್ಷೆ ಬರೆದರೆ, ಕಲಿಕೆಗೆ ಅನುಗುಣವಾಗಿ ಅಂಕಗಳನ್ನು ಗಳಿಸಬಹುದು ಎಂದು ಕಿರಿಕೊಡ್ಲಿ ಮಠಾಧೀಶರರಾದ ಸದಾಶಿವ ಸ್ವಾಮೀಜಿ ಹೇಳಿದರು.
ಪಟ್ಟಣದ ಎಸ್.ಜೆ.ಎಂ.ಪ್ರೌಡಶಾಲೆ ಆವರಣದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರೀಕ್ಷೆಗೆ ತಯಾರಿ ಹೇಗಿರಬೇಕು ಎಂಬ ವಿಷಯದಲ್ಲಿ ಸದಾಶಿವಸ್ವಾಮೀಜಿ ಉಪನ್ಯಾಸ ನೀಡಿದರು.
ಇಂದು ಸ್ಪರ್ಧಾತ್ಮಕ ಯುಗ, ನಿರಂತರ ಓದು ನಮ್ಮಲ್ಲಿ ಜ್ಞಾನ ತುಂಬಿಸುತ್ತದೆ. ಇಂದು ಕಲಿತ ವಿಷಯ ಕೊನೆತನಕ ನಮ್ಮ ಜೊತೆಯಲ್ಲೇ ಇರುತ್ತದೆ. ಓದು ಕೇವಲ ಪರೀಕ್ಷೆ ಎದುರಿಸುವುದಕ್ಕೆ ಮಾತ್ರವಲ್ಲ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ನೆರವಾಗುತ್ತದೆ. ಶಿಕ್ಷಕರು ಹೇಳಿದ ವಿಷಯಗಳನ್ನು ತಲೆಯಲ್ಲಿಟ್ಟುಕೊಳ್ಳಬೇಕು ಎಂದರು.
ಪರೀಕ್ಷೆಯ ಬಗ್ಗೆ ಭಯಬೇಡ ಹತ್ತು ತಿಂಗಳಲ್ಲಿ ನೀವು ಕಲಿತಿದ್ದನ್ನು ನೀವು ಬರೆಯುತ್ತೀರಿ ಅಷ್ಟೇ, ಆದ್ದರಿಂದ ಮೊದಲು ಪ್ರಶ್ನೆ ಪತ್ರಿಕೆಯನ್ನು ಗಮನವಿಟ್ಟು ಓದಿರಿ ಸುಲಭದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ, ವಿದ್ಯಾರ್ಥಿಗಳು ಸಮಾಧಾನದಿಂದ ಪರೀಕ್ಷೆ ಬರೆಯುವ ಮನಸ್ಥಿತಿ ಬೆಳೆಸಿಕೊಳ್ಳಿ. ಪರೀಕ್ಷೆಯ ಸಮಯದಲ್ಲಿ ಮೊದಲ ಹದಿನೈದು ನಿಮಿಷ ಪ್ರಶ್ನೆಗಳನ್ನು ಓದಬೇಕು. ಪ್ರಶ್ನೆಯನ್ನು ಅರ್ಥಮಾಡಿಕೊಂಡು ಉತ್ತರ ಬರೆಯಿರಿ.
ವಿರಕ್ತಮಠದ ಮಠಾಧೀಶರಾದ ನಿಶ್ಚಲನಿರಂಜನ ದೇಶಿಕೇಂದ್ರ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ವಿತರಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಮೃತ್ಯುಂಜಯ, ಮಾಜಿ ಸದಸ್ಯ ಎಸ್.ಮಹೇಶ್, ಮುಖ್ಯೋಪಾಧ್ಯಾಯರಾದ ಮಾರಪ್ಪ, ಶಿಕ್ಷಕಿ ರಾಣಿ ರವೀಂದ್ರ ಹಾಜರಿದ್ದರು.









