ಮಡಿಕೇರಿ ಮಾ.30 NEWS DESK : ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಎರಡನೇ ದಿನ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು, ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡುವ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಿ ಶಾಲೆಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತಂದುಕೊಡಬೇಕು ಎಂದು ಕರೆ ನೀಡಿದರು.
ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಗೆ ತನ್ನದೇ ಆದ ಇತಿಹಾಸವಿದೆ, ಇಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಉನ್ನತ ಸ್ಥಾನಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ಜನರಲ್ ತಿಮ್ಮಯ್ಯ ಅವರ ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ವೀರಾಸೇನಾನಿಗೆ ನಿರಂತರ ಗೌರವ ಸೂಚಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಿ ಜೀವನ ನಡೆಸಲು ಶಿಕ್ಷಕರು ಹಾಗೂ ಶಾಲೆಯ ಆಡಳಿತ ಮಂಡಳಿ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ.
ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇಂದು ದೇಶ ವಿದೇಶದಲ್ಲಿ ಉತ್ತಮ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಮ್ಮ ದೇಶದ ಉತ್ತಮ ಪ್ರಜೆಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇದು ಉತ್ತಮ ಭವಿಷ್ಯ ರೂಪಿಸುವ ದೇಗುಲವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸನ್ನು ಸಾಧಿಸಿ ಎಂದು ವೀಣಾ ಅಚ್ಚಯ್ಯ ಕಿವಿಮಾತು ಹೇಳಿದರು.
ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಕಾಲೇಜ್ ನ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥ ಕೊಡಂದೇರ ಹರೀಶ್ ಮಾಚಯ್ಯ ಅವರು ಮಾತನಾಡಿ, ಜನರಲ್ ತಿಮ್ಮಯ್ಯ ಅವರು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿದ್ದು, ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ. ಅವರೊಬ್ಬರು ಸಜ್ಜನ ಸೇನಾನಿ, ಅವರ ಹೆಸರಿನಲ್ಲಿ ನಡೆಯುತ್ತಿರುವ ಜನರಲ್ ತಿಮ್ಮಯ್ಯ ಶಾಲೆಯು ಮಾದರಿ ಶಿಕ್ಷಣ ಸಂಸ್ಥೆಯಾಗಿ 25 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ವಿಚಾರ ಎಂದರು.
ದೇಶದ ರಕ್ಷಣಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅಪ್ರತಿಮ ವೀರಸೇನಾನಿ ಎಂದು ಅಂಕಿಗಳ ಅಂಶಗಳ ಮೂಲಕ ಜನರಲ್ ತಿಮ್ಮಯ್ಯ ಅವರ ಹುಟ್ಟಿದ ದಿನ, ಹೆಸರುಗಳನ್ನು ವಿಭಿನ್ನವಾಗಿ ವಿವರಿಸಿ ವಿದ್ಯಾರ್ಥಿಗಳ ಗಮನ ಸೆಳೆದರು.
ಶಾಲಾ ಆಡಳಿತ ಮಂಡಳಿಯ ಕರೆಸ್ಪಾಂಡೆಂಟ್ ಕನ್ನಂಡ ಕವಿತ ಬೊಳ್ಳಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರಲ್ ತಿಮ್ಮಯ್ಯ ಶಾಲೆ ಎಲ್ಲಾ ವಿಷಯದಲ್ಲೂ ಮಾದರಿಯಾಗಿದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚು ಕಾಲಕಳೆಯುವ ಮೂಲಕ ಅವರ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಮತ್ತು ಶಿಕ್ಷಕರು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆ ಕಲ್ಪಿಸಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದರೆ ದೇಶದ ಒಬ್ಬ ಉತ್ತಮ ಪ್ರಜೆಯಾಗಿ ಗುರುತಿಸಿಕೊಳ್ಳುತ್ತಾರೆ. ಶಿಕ್ಷಕರ ಪರಿಶ್ರಮದೊಂದಿಗೆ ವಿದ್ಯಾರ್ಥಿಗಳು ಕೂಡ ಉತ್ತಮ ಫಲಿತಾಂಶ ಗಳಿಸುವ ಮೂಲಕ ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತಂದುಕೊಡಬೇಕು ಎಂದು ಕರೆ ನೀಡಿದರು.
ಪೋಷಕರ ಪರವಾಗಿ ವಿನಿತಾ ಮಾದಪ್ಪ ಮಾತನಾಡಿ, ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಂಡುವಂಡ ಪಿ.ಮುತ್ತಪ್ಪ, ಕಾರ್ಯನಿರ್ವಹಾಕರಾದ ಮುಕ್ಕಾಟಿರ ಪೊನ್ನಮ್ಮ ಮೊಣ್ಣಪ್ಪ, ಸದಸ್ಯರಾದ ನಂದಿನೆರವಂಡ ಎಂ.ದಿನೇಶ್, ಕೇಕಡ ಎ.ದೇವಯ್ಯ, ಮಂಡೀರ ಎಂ.ಮುದ್ದಪ್ಪ, ಮೂವೇರ ಕೆ.ಜಯರಾಮ್, ಬೊಪ್ಪಂಡ ಸರಳ ಕರುಂಬಯ್ಯ, ಕಾಂಡೇರ ಲಲ್ಲು ಕುಟ್ಟಪ್ಪ, ಶಿಕ್ಷಣ ತಜ್ಞರಾದ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಚೌರೀರ ಕಾವೇರಿ ಪೂವಯ್ಯ, ಶಾಲೆಯ ಪ್ರಾಂಶುಪಾಲೆ ಕಲ್ಮಾಡಂಡ ಸರಸ್ವತಿ ಸುಬ್ಬಯ್ಯ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕರಾದ ಕೆ.ಶಶಿ, ಟೈನಿ ಚಂಗಪ್ಪ, ಬಿ.ಎ.ಚರಿಷ್ಮಾ ಅವರುಗಳು ಸಭಾ ಕಾರ್ಯಕ್ರಮ ಹಾಗೂ ಶಿಕ್ಷಕ ಭರತ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಕೆ.ಬಿ.ಸೀತಮ್ಮ ಅವರು ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರ ಪರಿಚಯ ಮಾಡಿದರು. ಶಿಕ್ಷಕಿ ವಿನ್ಯಾ ಉತ್ತಪ್ಪ ಅವರು ಕೊಡಂದೇರ ಹರೀಶ್ ಮಾಚಯ್ಯ ಅವರ ಪರಿಚಯ ಮಾಡಿದರು.
ವಿದ್ಯಾರ್ಥಿಗಳು ಹಾಗೂ ಪೋಷಕರು ವೈವಿಧ್ಯಮಯ ನೃತ್ಯ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಪೋಷಕರ ಪ್ರತಿಭಾ ಪ್ರದರ್ಶನಕ್ಕೂ ಅವಕಾಶ ಕಲ್ಪಸಿದ ಶಾಲಾ ಆಡಳಿತ ಮಂಡಳಿ ಮೆಚ್ಚುಗೆಗೆ ಪಾತ್ರವಾಯಿತು.
:: ಮಾ.31 ರಂದು ಸಮಾರೋಪ ಸಮಾರಂಭ ::
ಮಾ.31 ರಂದು 2.30 ಗಂಟೆಗೆ ಕೊಡವ ಸಮಾಜ ಮತ್ತು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಮೇರಿಯಂಡ ನಾಣಯ್ಯ, ಕಾಫಿ ಬೆಳೆಗಾರ ಹಾಗೂ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಪಾಲ್ಗೊಳ್ಳಲಿದ್ದಾರೆ.