ಮಡಿಕೇರಿ ಮಾ.30 NEWS DESK (ಬರಹ : ಬೊಳ್ಳಜಿರ ಬಿ.ಅಯ್ಯಪ್ಪ 98807 78047) ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ದ್ವಿಚಕ್ರ ವಾಹನಗಳ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಬೇಡಿಕೆಗೆ ತಕ್ಕಂತೆ ನೂತನ ದ್ವಿಚಕ್ರ ವಾಹನಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುತ್ತಿವೆ.
2020ರಲ್ಲಿ ದೇಶದಲ್ಲಿ 21.2 ಮಿಲಿಯನ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. 2025ರ ವೇಳೆಗೆ ಇವುಗಳ ಸಂಖ್ಯೆ 26.6 ಮಿಲಿಯನ್ ಯುನಿಟ್‍ಗಳನ್ನು ತಲುಪಲಿದೆ ಎಂದು ವರದಿಯೊಂದು ತಿಳಿಸಿದೆ. ದ್ವಿಚಕ್ರ ವಾಹನಗಳ ನೋಂದಣಿಯು ಶೇ.46ರಷ್ಟು ಹೆಚ್ಚಾಗಿರುವುದು ಗಮನಾರ್ಹ. ಭಾರತದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರಿಕೆ ಕಾಣುತ್ತಿರುವುದರಿಂದ ಅಪಘಾತ ಪ್ರಕರಣಗಳು ಹೆಚ್ಚಾಗಬಹುದು ಎಂದು 2016ರಲ್ಲಿ ಪ್ರಕಟವಾದ ವಿಶ್ವಸಂಸ್ಥೆಯ ಮೋಟಾರ್ ಸೈಕಲ್ ಅಧ್ಯಯನ ವರದಿಯಲ್ಲಿ ಎಚ್ಚರಿಕೆ ನೀಡಲಾಗಿತ್ತು.
ಭಾರತದಲ್ಲಿ ಅಪಘಾತ ಸಂಬಂಧಿತ ಸಾವುಗಳಲ್ಲಿ ದ್ವಿಚಕ್ರ ಮತ್ತು ಪಾದಚಾರಿಗಳ ಪ್ರಮಾಣ ಶೇ.54ರಷ್ಟಿದೆ. ದ್ವಿಚಕ್ರ ವಾಹನ ಅಪಘಾತದಿಂದ ಪ್ರತೀ ಗಂಟೆಗೆ ಸರಾಸರಿ ಆರು ಸಾವುಗಳಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಹೆಲ್ಮೆಟ್ ಧರಿಸದ ಕಾರಣ 2019ರಲ್ಲಿ 44,666 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 30,148 ಚಾಲಕರು ಹಾಗೂ 14,518 ಹಿಂಬದಿ ಸವಾರರು ಸೇರಿದ್ದಾರೆ.
2022 ರಲ್ಲಿ ದ್ವಿಚಕ್ರ ವಾಹನಗಳ ಅಪಘಾತದಿಂದ ಆಗಿರುವ ಸಾವುಗಳ ಸಂಖ್ಯೆ ಶೇ.8ರಷ್ಟು ಏರಿಕೆಯಾಗಿದೆ. 2021 ರಲ್ಲಿ 75 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಇದು ಭಾರತೀಯ ರಸ್ತೆಗಳಲ್ಲಿ ಉಂಟಾದ 1,68,491 ಸಾವುಗಳಲ್ಲಿ ಶೇ.44ರಷ್ಟಿದೆ. 2030 ರ ವೇಳೆಗೆ ಅಪಘಾತದಿಂದ ಆಗುವ ಸಾವುಗಳಲ್ಲಿ ಶೇ.50ರಷ್ಟು ಕಡಿಮೆ ಆಗಬೇಕು ಎಂದು ಸರ್ಕಾರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ಸಾವು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಯುವ ಸಮೂಹದ ನಿರ್ಲಕ್ಷ್ಯ.
ನಮ್ಮ ಜೀವದ ಸುರಕ್ಷತೆಗೆ ಕೂಡ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದರೆ ಹೇಗೆ ಸಾಧ್ಯ, ಸರ್ಕಾರವೇ ಬುದ್ದಿ ಹೇಳಬೇಕು ಎನ್ನುವುದು ಎಷ್ಟು ಸರಿ. ನಮ್ಮ ಜೀವ ನಮ್ಮ ಕೈಯಲ್ಲಿದೆ, ನಿಮ್ಮ ಜೀವ ಮತ್ತು ಉಜ್ವಲ ಜೀವನದ ಕನಸುಗಳನ್ನು ಹೆತ್ತವರು ಹೊತ್ತಿರುತ್ತಾರೆ ಎನ್ನುವ ಕನಿಷ್ಠ ಕಾಳಜಿಯಾದರೂ ಇಂದಿನ ಯುವಕರಿಗೆ ಇದ್ದಿದ್ದರೆ ದ್ವಿಚಕ್ರ ವಾಹನಗಳ ಅಪಘಾತದಿಂದ ಲೆಕ್ಕವಿಲ್ಲದಷ್ಟು ಜೀವಗಳು ಕಣ್ಮರೆಯಾಗುತ್ತಿರಲಿಲ್ಲ.
ನಮ್ಮ ಕೆಲಸ ಬೇಗ ಆಗಬೇಕು, ನಾವು ತಲುಪಬೇಕಾದಲ್ಲಿಗೆ ಬೇಗ ತಲುಪಬೇಕು, ಇಂಧನ ಉಳಿತಾಯವಾಗಬೇಕು ಎಂಬಿತ್ಯಾದಿ ಕಾರಣಗಳಿಗಾಗಿ ದ್ವಿಚಕ್ರ ವಾಹನಗಳು ಸಹಕಾರಿಯಾಗಿದೆ. ಆದರೆ ಇಂದು ಮೂಲ ಉದ್ದೇಶವನ್ನು ಮರೆತ ಯುವ ಸಮೂಹ ದ್ವಿಚಕ್ರ ವಾಹನಗಳನ್ನು ಬಳಸುತ್ತಿರುವ ರೀತಿ ಮಾತ್ರ ಅಪಾಯಕ್ಕೆ ಆಹ್ವಾನ ನೀಡುವಂತ್ತಿದೆ. ಶೋಕಿಗಾಗಿ ದ್ವಿಚಕ್ರ ವಾಹನಗಳ ಬಳಕೆಯಾಗುತ್ತಿದೆ, ಶರವೇಗ ಜೀವಕ್ಕೆ ಕಂಟಕವಾಗುತ್ತಿದೆ.
ಮನೆಯಿಂದ ಹೋದ ಮಗ ಮರಳಿ ಬಾರದ ಲೋಕಕ್ಕೆ ಹೋದಾಗ ಹೆತ್ತವರ ಕರುಳಿನ ಕೂಗು ಯಾವ ರೀತಿಯದ್ದಾಗಿರುತ್ತದೆ ಎನ್ನುವುದನ್ನು ಇಂದಿನ ಯುವ ಸಮೂಹ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಶೋಕಿ, ನಿಮ್ಮ ಶರವೇಗ ಮನೆಯವರ ಶೋಕಕ್ಕೆ ಕಾರಣವಾಗಬಹುದು ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಕಾಲೇಜ್ ಗಳಿಗೆ ಬೈಕ್, ಸ್ಕೂಟರ್ ನ್ನು ಕೊಂಡೊಯ್ಯಿರಿ, ಆದರೆ ಸುರಕ್ಷತೆಯ ಬಗ್ಗೆ ಗಮನವಿರಲಿ. ಹೆಲ್ಮೆಟ್ ಧರಿಸದ ಕಾರಣಕ್ಕಾಗಿಯೇ ಅಸಂಖ್ಯಾತ ಜೀವಗಳು ಹಾರಿ ಹೋದ ಉದಾಹರಣೆಗಳಿವೆ.
ಸಾರಿಗೆ ನಿಯಮವನ್ನು ಪ್ರತಿಯೊಬ್ಬರು ಪಾಲಿಸಬೇಕು, ಭಾರೀ ವಾಹನಗಳ ಬಳಿ ಅತ್ಯಂತ ಜಾಗರೂಕತೆಯ ಚಾಲನೆ ಮುಖ್ಯ. ಓವರ್ ಟೇಕ್ ಮಾಡುವ ಭರದಲ್ಲಿ ವಾಹನಗಳ ಎಡಭಾಗದಿಂದ ಮುನ್ನುಗ್ಗುವ ಆತುರದಲ್ಲಿ ಅಮೂಲ್ಯ ಜೀವವನ್ನು ಕಳೆದುಕೊಂಡೀರಿ ಜೋಕೆ. ಜೀವವಿದ್ದರೆ ತಲೆಯ ಕೂದಲನ್ನು ಮತ್ತೆ ಬಾಚಬಹುದು, ಜೀವವಿದ್ದರೆ ತಲುಪಬೇಕಾದ ಗುರಿಯನ್ನು 5-10 ನಿಮಿಷ ತಡವಾಗಿಯಾದರೂ ತಲುಪಬಹುದು.
ಆದರೆ ಅವಸರದ ಚಾಲನೆಯಿಂದ ಜೀವ ಹೋದರೆ ಮತ್ತೆ ಬರಲು ಸಾಧ್ಯವಿಲ್ಲ. ಅಪ್ಪ, ಅಮ್ಮ, ಅಣ್ಣ, ತಮ್ಮ, ಅಕ್ಕ, ತಂಗಿಯರ ಕಣ್ಣೀರು ಒರೆಸುವ ಅದೃಷ್ಟವೂ ನಿಮ್ಮ ಜೊತೆಯಲ್ಲಿರುವುದಿಲ್ಲ, ಹೆತ್ತವರಿಗೆ ನೀವು ಉಳಿಸಿ ಹೋಗುವ ಏಕೈಕ ಆಸ್ತಿ ಎಂದರೆ ಅದು ನಿರಂತರ ಶೋಕ ಮಾತ್ರ. ಆದ್ದರಿಂದ ಯುವ ಸಮೂಹ ರಸ್ತೆ ಸುರಕ್ಷತೆಯನ್ನು ನಿರ್ಲಕ್ಷಿಸದೆ ಜಾಗೃತಗೊಳ್ಳಲೇಬೇಕಾಗಿದೆ.
ಶಾಲಾ, ಕಾಲೇಜು ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳ ಬಳಕೆ ಸಂದರ್ಭ ಸಾರಿಗೆ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅಪ್ರಾಪ್ತರೂ ದ್ವಿಚಕ್ರ ವಾಹನಗಳನ್ನು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಪೋಷಕರ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಸಾರಿಗೆ ನಿಯಮವನ್ನು ಪಾಲಿಸಿ ಅರ್ಹತೆಯ ವಯಸ್ಸಿನಲ್ಲಿ ಪರವಾನಗಿ ಸಹಿತ ವಾಹನವನ್ನು ನೀಡಿದರೆ ಮತ್ತು ಬುದ್ದಿಮಾತು ಹೇಳಿದರೆ ಮಕ್ಕಳ ಜೀವ ಉಳಿಯುತ್ತದೆ ಎನ್ನುವುದನ್ನು ಪೋಷಕರು ಮೊದಲು ಅರ್ಥ ಮಾಡಿಕೊಳ್ಳಬೇಕು.
ಕೊಡಗು ಜಿಲ್ಲೆಯಲ್ಲೂ ದ್ವಿಚಕ್ರ ವಾಹನಗಳ ಅಪಘಾತದ ಸಂಖ್ಯೆ ಮಿತಿ ಮೀರುತ್ತಿದೆ. ಈ ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರು ಯುವಕರೇ ಹೆಚ್ಚು ಎನ್ನುವುದು ಗಮನಾರ್ಹ. ಜಿಲ್ಲೆಯಲ್ಲಿ ಬೆಟ್ಟಗುಡ್ಡ ಮತ್ತು ತಿರುವು ರಸ್ತೆಗಳೇ ಹೆಚ್ಚು ಇರುವುದರಿಂದ ಅತ್ಯಂತ ಎಚ್ಚರಿಕೆಯ ಚಾಲನೆಯ ಅಗತ್ಯವಿದೆ. ಊರು ಮತ್ತು ರಸ್ತೆಗಳ ಬಗ್ಗೆ ಮಾಹಿತಿ ಇಲ್ಲದ ಪ್ರವಾಸಿಗರು ಅಪಘಾತಕ್ಕೊಳಗಾಗುವುದು ಸಾಮಾನ್ಯ. ಆದರೆ ಇಲ್ಲೇ ಹುಟ್ಟಿ ಬೆಳೆದ ಯುವಕರು ದ್ವಿಚಕ್ರ ವಾಹನಗಳ ಅಪಘಾತದಲ್ಲಿ ದುರಂತ ಅಂತ್ಯ ಕಾಣುತ್ತಿರುವುದು ಮಾತ್ರ ವಿಪರ್ಯಾಸ.
ಯುವಕರ ರಾತ್ರಿ ವೇಳೆಯ ಚಾಲನೆ ಅತ್ಯಂತ ಅಪಾಯಕಾರಿಯಾಗಿದೆ, ಅತಿವೇಗ ಮತ್ತು ದ್ವಿಚಕ್ರ ವಾಹನದ ಬೆಳಕಿನ ಬಳಕೆಯನ್ನು ಸಮರ್ಪಕವಾಗಿ ಮಾಡದೆ ಅಪಘಾತಗಳು ಸಂಭವಿಸುತ್ತಿದೆ. ಬೆಳಕಿನ ಬಳಕೆ ಸರಿಯಾದ ರೀತಿಯಲ್ಲಿ ಮಾಡದೆ ಇರುವುದರಿಂದ ಎದುರು ಭಾಗದಲ್ಲಿ ಬರುವ ವಾಹನಗಳು ಕೂಡ ಅಪಘಾತಕ್ಕೆ ಸಿಲುಕುತ್ತಿವೆ. ಹೆಲ್ಮೆಟ್ ಧರಿಸದೆ ಚಾಲನೆ ಮಾಡುತ್ತಿರುವುದರಿಂದ ಅಪಘಾತವಾದಾಗ ತಲೆಯಿಂದ ರಕ್ತಸ್ರಾವವಾಗಿ ಮೃತಪಡುತ್ತಿರುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ.
ವಾಹನಗಳಲ್ಲಿ ತೆರಳುವಾಗ ಮಾತ್ರವಲ್ಲದೆ ಪಾದಾಚಾರಿಗಳಾಗಿ ಸಂಚರಿಸುವಾಗಲೂ ವಿದ್ಯಾರ್ಥಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕಾಲೇಜು ಬಿಡುವ ಸಂದರ್ಭ ವಾಹನಗಳ ಸಂಚಾರವಿದ್ದರೂ ರಸ್ತೆಯ ಇಕ್ಕೆಲಗಳಲ್ಲಿ ಗುಂಪುಗುಂಪಾಗಿ ತೆರಳುತ್ತಿರುವುದರಿಂದ ವಾಹನ ಸವಾರರಿಗೆ ಅಡಚಣೆಯಾಗುತ್ತಿದೆ. ಅಲ್ಲದೆ ಅಪಘಾತಗಳು ಸಂಭವಿಸಿ ಅಶಾಂತಿಗೆ ಕಾರಣವಾಗುತ್ತಿದೆ. ರಸ್ತೆಯ ಒಂದು ಬದಿಯಲ್ಲಿ ಸಂಚರಿಸಿದರೆ ವಾಹನ ಸವಾರÀರು ಮಾತ್ರವಲ್ಲ ವಿದ್ಯಾರ್ಥಿಗಳು ಕೂಡ ಸುರಕ್ಷಿತವಾಗಿರಬಹುದು.
ಶಿಕ್ಷಣ ಸಂಸ್ಥೆಗಳು ಹಾಗೂ ಸಾರಿಗೆ ಇಲಾಖೆ ರಸ್ತೆ ಸುರಕ್ಷತೆಯ ಕುರಿತು ವಿದ್ಯಾರ್ಥಿಗಳಲ್ಲಿ ಹೆಚ್ಚು ಅರಿವು ಮೂಡಿಸುವ ಅನಿವಾರ್ಯತೆ ಇದೆ. ಅಪಘಾತ ಸಂಭವಿಸಿ ಸಾವನ್ನಪ್ಪಿದರೆ ಅಥವಾ ಅಂಗ ವೈಕಲ್ಯಕ್ಕೆ ಒಳಗಾಗದರೆ ಯಾರಿಗೆ ಕಷ್ಟನಷ್ಟ ಎನ್ನುವುದನ್ನು ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡುವ ಅಗತ್ಯವಿದೆ. ಯುವ ಸಮೂಹದ ಸುರಕ್ಷತೆಯ ದೃಷ್ಟಿಯಿಂದ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಕಠಿಣ ಸಾರಿಗೆ ನಿಯಮಗಳನ್ನು ಜಾರಿಗೆ ತರುವ ಅವಶ್ಯಕತೆ ಇದೆ.
ಕೇವಲ ಕಠಿಣ ನಿಯಮಗಳಿಂದಲೇ ಜೀವ ಉಳಿಸಲು ಸಾಧ್ಯವಿಲ್ಲ, ಜವಬ್ದಾರಿಯುತ ಸ್ಥಾನದಲ್ಲಿರುವ ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುಗೆಯಾಗಿ ನೀಡಿದರೆ ಸಾಲದು. ಬುದ್ದಿ ಮಾತಿನ ಮೂಲಕ ಮಕ್ಕಳ ಜೀವ ಉಳಿಸುವ ಪ್ರಯತ್ನವನ್ನೂ ಮಾಡಬೇಕು. ಯುವ ಸಮೂಹ ಕೂಡ ಜವಬ್ದಾರಿಯಿಂದ ನಡೆದುಕೊಳ್ಳಬೇಕು, ಶೋಕಿ ಮತ್ತು ಶರವೇಗಕ್ಕೆ ಆದ್ಯತೆ ನೀಡದೆ ಅಮೂಲ್ಯ ಜೀವದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ಜನ್ಮದಾತರ ಬಗ್ಗೆ ಕಾಳಜಿ ತೋರಬೇಕು. ಸದುದ್ದೇಶಕ್ಕೆ ಮಾತ್ರ ದ್ವಿಚಕ್ರ ವಾಹನಗಳ ಬಳಕೆಯಾಗಲಿ, ವೇಗದಲ್ಲಿ ಮಿತಿ ಇರಲಿ.