ಮಡಿಕೇರಿ ಮಾ.30 NEWS DESK : ಯುವ ಪೀಳಿಗೆಯ ಸೂಕ್ತ ಚಿಂತನೆಯ ರಹದಾರಿಯಲ್ಲಿ ಮುನ್ನಡೆಯಬೇಕು. ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗಬೇಕು. ಮತದಾನದಂತಹ ಪ್ರಜಾಪ್ರಭುತ್ವದ ಹಬ್ಬದಲ್ಲಿ ಯುವ ತಲೆಮಾರು ಸಕ್ರಿಯವಾಗಿ ಭಾಗವಹಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಲವರ್ಧನೆಗೆ ಸಹಕಾರಿಯಾಗಬೇಕು ಎಂದು ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷರಾದ ಪ್ರಮೋದ್ ರೈ ಹೇಳಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕೊಡಗು ಜಿಲ್ಲಾ ಅಂತರಕಾಲೇಜು ಎನ್ ಎಸ್ ಎಸ್ ಸ್ವಯಂ ಸೇವಕರಿಗಾಗಿ ನಡೆಸಿದ ಯುವ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಪಿಡಿಒ ಅಬ್ದುಲ್ಲಾ ಸ್ಪರ್ಧಾತ್ಮಕ “ಜಗತ್ತು ಮತ್ತು ಯುವ ಜನತೆ : ಶೈಕ್ಷಣಿಕ, ಸಾಮಾಜಿಕ ಸಾಧ್ಯತೆ” ಎಂಬ ವಿಷಯದ ಕುರಿತು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಶೈಕ್ಷಣಿಕ ಸಾಧ್ಯತೆಯ ಮೂಲಕ ಸರಕಾರಿ ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ನಮ್ಮ ನಡಾವಳಿಗಳನ್ನು ನಾವೇ ರೂಪಿಸಿಕೊಳ್ಳಬೇಕು. ಆಗಿದ್ದಾಗ ಮಾತ್ರ ಇಡೀ ಜಗತ್ತೆ ನಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಯುಪಿಎಸಿ, ಕೆಪಿಎಸ್ ಸಿ ಪರೀಕ್ಷೆಗಳ ತಯಾರಿ ಮಾರ್ಗದರ್ಶನ ನೀಡಿದರು.
ಕೆನರಾ ಬ್ಯಾಂಕ್ ಮಡಿಕೇರಿ ಪಶ್ಚಿಮ ಶಾಖೆಯ ವ್ಯವಸ್ಥಾಪಕ ಪಿ.ಕೆ.ಅವಿನಾಶ್ ಮಾತನಾಡಿ, ತಂತ್ರಜ್ಞಾನದ ಮೂಲಕ ಹೇಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬಹುದು ಎಂಬ ವಿಚಾರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪೆÇ್ರ. ಬಿ.ರಾಘವ, ನನಗೆ ಯಾವ ವಿಚಾದ ಕುರಿತು ಅರಿವಿಲ್ಲ ಎಂಬ ತಿಳುವಳಿಕೆ ಪ್ರತಿಯೊಬ್ಬನಿಗೂ ಅಗತ್ಯ. ಉತ್ತಮವಾದ ಮಾನವ ಸಂಪನ್ಮೂಲವನ್ನು ಶಿಕ್ಷಣ ಸಂಸ್ಥೆಗಳು ಉತ್ಪಾದಿಸಬೇಕಾಗಿದೆ. ಸಮಯವನ್ನು ವ್ಯರ್ಥ ಮಾಡಬೇಡಿ. ಸಂವಾದದ ನೆಲೆಯನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು. ಸಮಾಜ ವಿರೋಧಿ ನಿಲುವುಗಳ ಬಗ್ಗೆ ಎಚ್ಚರ ವಹಿಸಬೇಕು. ಯುವ ಸಂವಾದ ದೇಶವ್ಯಾಪಿ ರಾಷ್ಟ್ರೀಯ ಅಭಿಯಾನವಾಗಿ ಆಚರಿಸಲ್ಪಡುತ್ತಿರುವ ಯುವ ಸಮೂಹದ ಹಬ್ಬ. ಯುವ ಸಂವಾದದ ಮೂಲಕ ತಮ್ಮ ಸೃಜನಶೀಲತೆ, ಕೌಶಲ್ಯಾಭಿವೃದ್ಧಿ ಆಯಾಮವನ್ನು ವಿಸ್ತರಿಸಲಿರುವ ಮಹೋನ್ನತವಾದ ವೇದಿಕೆಯಾಗಿದೆ ಎಂದರು.
ಉನ್ನತ ಶಿಕ್ಷಣದ ಜೊತೆಯಲ್ಲಿ ಕೌಶಲ್ಯ ಭಾರತದ ಕಲ್ಪನೆಯನ್ನು ಇಲ್ಲಿ ಗ್ರಹಿಸಲು ಸಾಧ್ಯವಿದೆ. ತಂತ್ರಜ್ಞಾನ, ಕೃತಕಬುದ್ದಿಮತ್ತೆಯನ್ನು ದುಡಿಸಿಕೊಂಡೆ ದೇಶದ ಅಭಿವೃದ್ಧಿಗೆ ಯುವ ಜನತೆಯ ಮನೋಭೂಮಿಕೆಯನ್ನು ರೂಪಿಸುವ ಪ್ರಯತ್ನ ಇಲ್ಲಿದೆ.
ಪ್ರತಿಭೆಯನ್ನು ಸಮಾಜಮುಖಿಗೊಳಿಸಿ ಪ್ರಜಾಪ್ರಭುತ್ವವಾದ ನಿರೂಪಣೆಗಳನ್ನು ಸ್ಥಾಪಿಸಲು ಇಲ್ಲಿ ನಡೆಸುವ ಸ್ಪರ್ಧೆಗಳು ಪೂರಕವಾಗಿದೆ. ಪ್ರಜಾಪ್ರಭುತ್ವ, ಸಂವಿಧಾನ, ವ್ಯಕ್ತಿಗೌರವ, ನಾಯಕತ್ವ, ಗುಂಪು ನಿರ್ಣಯ, ಕಲೆ, ಸಾಹಿತ್ಯ ಸಂಗೀತದಂತಹ ಪರಿಕಲ್ಪನಾತ್ಮಕ ಅಂಶಗಳ ಕಡೆಗೆ ಈ ಕಾರ್ಯಕ್ರಮ ಹೆಚ್ಚು ಬೆಳಕು ಚೆಲ್ಲುತ್ತದೆ. ಬೌದ್ಧಿಕತೆ, ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ಅನುಸಂಧಾನವನ್ನು ವಿದ್ಯಾರ್ಥಿ ದೆಸೆಯಿಂದ ರೂಪಿಸಲು ಸಹಕಾರಯುತವಾದ ವೇದಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಎನ್.ಎಸ್.ಎಸ್ ಘಟಕ-2 ಯೋಜನಾಧಿಕಾರಿ ಡಾ. ಎ.ಎನ್.ಗಾಯತ್ರಿ ಸ್ವಾಗತಿಸಿದರು. ಎನ್.ಎಸ್.ಎಸ್ ಘಟಕ-1 ಯೋಜನಾಧಿಕಾರಿ ಡಾ. ಮಹದೇವಯ್ಯ ವಂದಿಸಿದರು.
ಮಧ್ಯಾನದ ನಂತರ ಕೊಡಗು ಜಿಲ್ಲಾ ವ್ಯಾಪ್ತಿಯ ಅಂತರ ಕಾಲೇಜು ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ಸಾಮಾಜಿಕ ಜವಾಬ್ದಾರಿ ಮತ್ತು ಯುವಜನತೆ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡನೆ ಸ್ಪರ್ಧೆ, ವಿವಿಧ ವಿಚಾರಗಳ ಕುರಿತು ವಿಚಾರ ಸಂವಾದ, ನನ್ನ ಕನಸಿನ ಭಾರತ ಎಂಬ ವಿಷಯದ ಬಗ್ಗೆ ಕೊಲಾಜ್ ಮೇಕಿಂಗ್ ಸ್ಪರ್ಧೆ ನಡೆದು ವಿಜೇತರಿಗೆ ಪ್ರಮಾಣಪತ್ರ ಮತ್ತು ಪುಸ್ತಕ ಬಹುಮಾನ ವಿತರಿಸಲಾಯಿತು.