ಮಡಿಕೇರಿ ಏ.3 NEWS DESK : ಇತ್ತೀಚೆಗೆ ಕುಶಾಲನಗರ ಮತ್ತು ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಶಾಸಕರ ಸಹಿತ ಇತರರ ಜೇಬಿನಿಂದ ಪಿಕ್ ಪಾಕೆಟ್ ಮಾಡಿದ್ದ 13 ಮಂದಿ ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಮೂಲದ 11 ಮತ್ತು ಬೆಂಗಳೂರು ಮೂಲದ ಇಬ್ಬರು ಆರೋಪಿಗಳನ್ನು ಇದೀಗ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ. ಆರೋಪಿಗಳು ಪಿಕ್ ಪಾಕೆಟ್ ಮಾಡಿದ್ದ 1 ಲಕ್ಷ 96 ಸಾವಿರದ 300 ರೂ.ಗಳ ಪೈಕಿ 65 ಸಾವಿರದ 960 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ್ದ 12 ಮೊಬೈಲ್ ಫೋನ್‌ಗಳು, 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
: ಬಂಧಿತ ಆರೋಪಿಗಳು :
ಶಿವಮೊಗ್ಗ ಭದ್ರಾವತಿಯ ಜಯಣ್ಣ ಅಲಿಯಾಸ್ ಕಿರಿಕ್ ಜಯ(38), ಪುಟ್ಟರಾಜು ಅಲಿಯಾಸ್ ಪುಟ್ಟ(39), ಸಿ.ನಾಗರಾಜ ಅಲಿಯಾಸ್ ಕೋತಿ ಕಿಚ್ಚ(43), ರಾಮು ಅಲಿಯಾಸ್ ಕುಳ್ಳರಾಮು(43), ಕೆ.ಉಮೇಶ್(36), ಜಯಣ್ಣ ಅಲಿಯಾಸ್ ದೊಡ್ಡ ಜಯಣ್ಣ(53), ಬೋಜಪ್ಪ ಅಲಿಯಾಸ್ ಬೋಜ(50), ಮೆಹಬೂಬ್ ಸುಭಾನ್(48), ಡಿ.ಗಿರೀಶ(31), ಬಾಲು(35), ಬೆಂಗಳೂರು ಹೆಬ್ಬುಗೋಡಿಯ ಹರೀಶ(35), ನೆಲಮಂಗಲದ ರಂಗಣ್ಣ ಅಲಿಯಾಸ್ ರಂಗ(50) ಎಂಬವರೇ ಬಂಧಿತ ಪಿಕ್ ಪಾಕೆಟ್ ಆರೋಪಿಗಳಾಗಿದ್ದಾರೆ.
ಪ್ರಕರಣ ಹಿನ್ನೆಲೆ:
ಮಡಿಕೇರಿ ನಗರ ಪೊಲೀಸ್ ಠಾಣೆ ಮತ್ತು ಕುಶಾಲನಗರ ಠಾಣಾ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ.27ರಂದು ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೃತಕವಾಗಿ ನೂಕುನುಗ್ಗಲು ಸೃಷಿಸಿ ಕುಶಾಲನಗರ ಇಂದಿರಾ ಬಡಾವಣೆಯ ಎಂ.ಎA. ಚರಣ್ ಅವರ 32 ಸಾವಿರ, ಡಿ.ಹೆಚ್. ಚಂದ್ರಶೇಖರ್ ಬಳಿಯಿದ್ದ 50 ಸಾವಿರ, ಹೆಚ್.ಮಣಿ ಎಂಬವರ ಜೇಬಿನಿಂದ 15 ಸಾವಿರ ಹಾಗೂ ಮಡಿಕೇರಿಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗಸಮುದ್ರ ನಿವಾಸಿ ಹೆಚ್.ಎಸ್.ನಿತಿನ್ ಅವರ ಜೇಬಿನಿಂದ 50 ಸಾವಿರ, ವಿರಾಜಪೇಟೆ ನಿವಾಸಿ ಯೋಗೇಶ್ ಅವರ ಬಳಿಯಿದ್ದ 32 ಸಾವಿರ, ಮಾಜೀ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ಜೇಬಿನಲ್ಲಿದ್ದ 17 ಸಾವಿರ ರೂ. ಸೇರಿದಂತೆ ಒಟ್ಟು 1,96,300 ರೂ.ಗಳನ್ನು ಪಿಕ್ ಪಾಕೆಟ್ ಮಾಡಲಾಗಿತ್ತು. ಈ ಕುರಿತು ಪ್ರತ್ಯೇಕ 3 ದೂರುಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಕಾರ್ಯಪ್ರೌವೃತ್ತರಾದ ಪೊಲೀಸರು ಸಭಾಂಗಣದಲ್ಲಿ ಅಳವಡಿಸಲಾಗಿದ್ದ ಸಿ.ಸಿ ಕ್ಯಾಮರಾ ದೃಶ್ಯಾವಳಿಗಳ ಸಹಿತ ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ಇನ್ನೋವಾ ಕಾರು ಹಾಗೂ ಇಟಿಯೋಸ್ ಕಾರು ಸಹಿತ 12 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಕುಶಾಲನಗರ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿಪ್ರಕಾಶ್, ಠಾಣಾಧಿಕಾರಿ ಬಿ.ಎಸ್. ಉಮಾ, ಕುಶಾಲನಗರ ಠಾಣಾ ಪೊಲೀಸ್ ಸಿಬ್ಬಂದಿಗಳು ಹಾಗೂ ಕ್ರೈಂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘಿಸಿದ್ದಾರೆ.











