ಮಡಿಕೇರಿ ಏ.5 NEWS DESK : ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ ಆದರ್ಶ ಜೀವನ ಮೌಲ್ಯಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗಾಂಧಿಭವನದಲ್ಲಿ ನಡೆದ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ 117ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಬು ಜಗಜೀವನ್ ರಾಂ ಅವರು ಬಿಹಾರದಲ್ಲಿ ಬಡ ಕುಟುಂಬದಲ್ಲಿ ಜನಿಸಿ ಬಾಲ್ಯ ಜೀವನವನ್ನು ಕಷ್ಟದಿಂದಲೇ ಎದುರಿಸಿದವರು. ತಮ್ಮ ಜೀವನದುದ್ದಕ್ಕೂ ಹೋರಾಟದ ಮೂಲಕ ಬೆಳವಣಿಗೆ ಕಂಡು ರಾಜಕೀಯ ಪ್ರವೇಶ ಮಾಡಿ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಅತ್ಯಂತ ಕಿರಿ ವಯಸ್ಸಿನ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ ಸಾಧನೆ ಬಾಬು ಜಗಜೀವನ್ ರಾಂ ಅವರದ್ದಾಗಿದೆ ಎಂದರು.
ಕಾರ್ಮಿಕ ಸಚಿವರಾಗಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಹಲವು ಕಾನೂನು ಜಾರಿಗೊಳಿಸುವ ಮೂಲಕ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಜೊತೆಗೆ ಕೃಷಿ ಸಚಿವರಾಗಿ ದೇಶದ ಆಹಾರ ಉತ್ಪಾದನೆಯನ್ನು ಅಭಿವೃದ್ಧಿಗೊಳಿಸಿ ಹಸಿರು ಕ್ರಾಂತಿಯ ಹರಿಕಾರನೆಂದು ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ರೈಲ್ವೆ ಹಾಗೂ ಸಂವಹನ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು ಪ್ರತೀ ಇಲಾಖೆಯ ಸಚಿವರಾದಾಗಲು ತಮ್ಮದೇ ಆದ ಛಾಪು ಮೂಡಿಸಿದ ಕೀರ್ತಿ ಡಾ.ಬಾಬು ಜಗಜೀವನ್ ರಾಂ ಅವರಿಗೆ ಸಲ್ಲುತ್ತದೆ ಎಂದರು.
ದೇಶದ ರಕ್ಷಣಾ ಸಚಿವರಾಗಿ ದೇಶದ ಬಾಹ್ಯ ಹಾಗೂ ಆಂತರಿಕ ಭದ್ರತೆಗೆ ಭದ್ರ ಬುನಾದಿ ಹಾಕುವ ಮೂಲಕ ದೇಶದ ಅಭಿವೃದ್ಧಿಗೆ ತಮ್ಮದೇ ಕೊಡುಗೆಯನ್ನು ನೀಡಿದವರು ಎಂದು ಬಾಬು ಜಗಜೀವನ್ ರಾಂ ಅವರ ಆದರ್ಶ ಜೀವನದ ಮೆಲುಕು ಹಾಕಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಮಾತನಾಡಿ ಸಾಮಾಜಿಕ ನ್ಯಾಯ ಜನ ಸಾಮಾನ್ಯರಿಗೆ ದೊರೆಕಿಸಿ ಕೊಡುವಲ್ಲಿ ಕೇಂದ್ರದ ಹಲವಾರು ಪ್ರಮುಖ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿ ಸಾಬೀತು ಪಡಿಸಿದ್ದಾರೆ. ಡಾ.ಬಾಬು ಜಗಜೀವನ್ ರಾಂ ಅವರನ್ನು ಅವರ ಸಾಧನೆಗಳಿಂದಲೇ ಜನರು ಗುರುತಿಸುವಂತೆ ಅಗಾಧ ಸಾಧನೆ ಗೈದು ಆದರ್ಶ ಜೀವನ ನಡೆಸಿದವರು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಮಾತನಾಡಿ, ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ 117ನೇ ಜನ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಇವರು ಸಾಮಾಜಿಕ ನ್ಯಾಯದ ಹಾಗೂ ಹಸಿರು ಕ್ರಾಂತಿಯ ಹರಿಕಾರರು. ಕಷ್ಟಕರ ಜೀವನದಿಂದಲೇ ಬೆಳೆದು ಬೆಂಕಿಯಲ್ಲಿ ಅರಳಿದ ಹೂವಾಗಿದ್ದಾರೆ. ಜೀವನದುದ್ದಕ್ಕೂ ಅವಕಾಶ ವಂಚಿತರ ಪರವಾಗಿ ಧ್ವನಿ ಎತ್ತಿದ ಧೀಮಂತ ನಾಯಕರು, ಕೇಂದ್ರ ಸಚಿವ ಸಂಪುಟದಲ್ಲಿ ಸುದೀರ್ಘ 30 ವರ್ಷ ಸಚಿವರಾಗಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಶೋಷಿತರ, ನೊಂದವರ ಧ್ವನಿಯಾಗಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದರು. ಇವರ ಆದರ್ಶ ಜೀವನ ಇಂದಿನ ಯುವ ಪೀಳಿಗೆ ಅನುಸರಿಸುವ ಮೂಲಕ ಗೌರವ ಸಮರ್ಪಿಸೋಣ. 1971 ರಲ್ಲಿ ಜರುಗಿದ ಭಾರತ-ಪಾಕ್ ಯುದ್ದದ ಸಂದರ್ಭದಲ್ಲಿ ಕೇಂದ್ರದ ರಕ್ಷಣಾ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಮೂಲಕ ಯುದ್ದದಲ್ಲಿ ಜಯ ಸಾಧಿಸಲು ಶ್ರಮಿಸಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಾಲಸುಬ್ರಹ್ಮಣ್ಯ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಸಪ್ಪ, ತಹಶೀಲ್ದಾರ್ ರಮೇಶ್ ಬಾಬು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.