ಮಡಿಕೇರಿ ಏ.7 NEWS DESK : ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ತಡೆಯಲಾಗದ ಉಷ್ಣಾಂಶದಿಂದ ಜನ ತತ್ತರಿಸಿ ಹೋಗಿದ್ದು, ಇಂದು ಜಿಲ್ಲೆಯ ವಿವಿಧೆಡೆ ಸುರಿದ ಹೂಮಳೆ ಕೊಂಚ ನೆಮ್ಮದಿಯನ್ನು ತಂದಿದೆ.
ಅತಿಹೆಚ್ಚು ವರ್ಷಧಾರೆಯಾಗುವ ಭಾಗಮಂಡಲದಲ್ಲಿ ವರ್ಷದ ಮೊದಲ ಮಳೆ ಇಂದು ಸುರಿಯಿತು. ಚೇರಂಬಾಣೆ, ನಾಪೋಕ್ಲು, ಎಮ್ಮೆಮಾಡು, ನೆಲಜಿ, ಕಾರುಗುಂದ, ಕಡಿಯತ್ತೂರು ಸುತ್ತಮುತ್ತಲ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ.
::: ಪೂಜೆ :::
ಕಾವೇರಿಯ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಉಷ್ಣಾಂಶ ಮಿತಿ ಮೀರುತ್ತಿರುವುದರಿಂದ ನದಿ ಮತ್ತು ಜಲಮೂಲಗಳು ಬತ್ತಿ ಹೋಗಿವೆ. ಗಿಡಮರಗಳು ಒಣಗಲು ಆರಂಭಗೊಂಡಿವೆ, ಕೃಷಿ ಫಸಲಿಗೆ ಹಾನಿಯಾಗಿದೆ. ಪರಿಸ್ಥಿತಿ ಕೈಮೀರುತ್ತಿರುವುದರಿಂದ ಕೊಡಗಿನ ಮಳೆ ದೇವರೆಂದೇ ನಂಬಿಕೊಂಡು ಬಂದಿರುವ ಪಾಡಿ ಶ್ರೀಇಗ್ಗುತ್ತಪ್ಪನಿಗೆ ಏ.8 ರಂದು ಸ್ಥಳೀಯ ಭಕ್ತಜನ ಸಂಘ ಹಾಗೂ ಭಕ್ತರು ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ, ಅಭಿಷೇಕ ಅರ್ಪಿಸಲಿದ್ದಾರೆ.










