ಮಡಿಕೇರಿ ಏ.7 NEWS DESK : ಕಾಂಗ್ರೆಸ್ ಎಲ್ಲೂ ಧರ್ಮಾಧಾರಿತ ರಾಜಕಾರಣ ಮಾಡುತ್ತಿಲ್ಲ, ಜನಸಾಮಾನ್ಯರ ಪರವಾದ ಕಾರ್ಯಕ್ರಮಗಳ ಮೂಲಕ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಿದಿದೆ. ಈ ಬಗ್ಗೆ ಜನ ಜಾಗೃತರಾಗಿದ್ದು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕರ ನಿವಾಸದ ಆವರಣದಲ್ಲಿ ನಡೆದ ವಲಯ, ಬೂತ್ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಅಭಿವೃದ್ಧಿಪರ ಚಿಂತನೆಯ ರಾಜಕಾರಣ ಮಾಡಿದರೆ, ಬಿಜೆಪಿ ಧರ್ಮವನ್ನು ಆಧರಿಸಿ ರಾಜಕಾರಣ ಮಾಡಿ ಸಮಜದಲ್ಲಿ ಸಂಘರ್ಷವನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತದೆ ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಐದು ಗ್ಯಾರಂಟಿಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಮತದಾರರು ನಮ್ಮ ಕೈಹಿಡಿಯಲಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಮೈಮರೆಯಬಾರದು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ ಅವರ ಗೆಲುವಿಗಾಗಿ ಪರಿಶ್ರಮ ಪಡಬೇಕು. ಚುನಾವಣೆ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದೊಳಗಿನ ಸಣ್ಣಪುಟ್ಟ ಅಸಮಾಧಾನವನ್ನು ಪ್ರತಿಬಿಂಬಿಸಿ ಒಂದು ದಿನದ ಹೀರೋ ಆಗಲು ಯಾರೂ ಪ್ರಯತ್ನಿಸಬಾರದು. ಗೊಂದಲಗಳಿದ್ದರೆ ಚುನಾವಣೆ ನಂತರ ಸರಿಪಡಿಸಿಕೊಳ್ಳೋಣ ಎಂದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಶಾಸಕರಿಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿತ್ತು. ಆದರೆ ಇದೀಗ ಕಾರ್ಯಕರ್ತರ ಸಂಘಟಿತ ಹೋರಾಟದ ಫಲವಾಗಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರುಗಳು ಇದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಕೊಡಗು- ಮೈಸೂರು ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸೋಣ ಎಂದು ಕರೆ ನೀಡಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅದ್ಯಕ್ಷ ಹನೀಫ್ ಪಿ.ಎ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅದ್ಯಕ್ಷ ಕೊಳುಮಂಡ ರಫೀಕ್, ವಕೀಲ ರವಿಂದ್ರ ಕಾಮತ್ ಜಿಲ್ಲಾ ಘಟಕದ ಮುಂಚೂಣಿ ನಾಯಕರು ಮತ್ತಿತರರು ಉಪಸ್ಥಿತರಿದ್ದರು.











