ಮಡಿಕೇರಿ ಏ.11 NEWS DESK : ಶ್ರೇಷ್ಠ ಭಾರತಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಬೆಂಬಲಿಸುವಂತೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಮನವಿ ಮಾಡಿದ್ದಾರೆ.
ಹುಣುಸೂರು ತಾಲ್ಲೂಕಿನ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ವಿಕಸಿತ ಭಾರತಕ್ಕಾಗಿ ಬಿಜೆಪಿಗೆ ಮತ ನೀಡುವಂತೆ ಕೋರಿದರು.
ನಗರದ ದೇವರಾಜ ಅರಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಯದುವೀರ್ ಅವರು, ಕಲ್ಲಹಳ್ಳಿಯ ದೇವರಾಜ ಅರಸರ ಸಮಾಧಿಗೆ ಗೌರವ ಸಮರ್ಪಿಸಿದರು.
ನಂತರ ಹನಗೋಡು ಬಳಿಯ ದೊಡ್ಡಹೆಜ್ಜೂರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರಚಾರ ಆರಂಭಿಸಿದರು. ಪ್ರಚಾರ ಸಭೆಯಲ್ಲಿ ಮಾತನಾಡಿದ ಯದುವೀರ್ ನಮ್ಮ ಪೂರ್ವಜರು ಈ ನಾಡಿನ ಜನರ ಶ್ರೇಯೋಭಿವೃದ್ಧಿಗಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಈ ಬಗ್ಗೆ ಜನರಲ್ಲಿ ಕೃತಜ್ಞತಾ ಭಾವವಿದೆ. ನಾನು ಕೂಡ ಜನಸೇವೆ ಮಾಡಲು ಉತ್ಸುಕನಾಗಿದ್ದೇನೆ ಎಂದರು.
ದೇಶದ ಅಭಿವೃದ್ಧಿ ಮತ್ತು ಜನರ ರಕ್ಷಣೆಗೆ ಸದಾ ಮಿಡಿಯುವ ಪ್ರಧಾನಿ ಮೋದಿಯವರ ಪ್ರಭಾವದಿಂದ ನಾನು ಸ್ಪರ್ಧಿಸಿದ್ದೇನೆ. ಶ್ರೇಷ್ಠ ಭಾರತ ನಿರ್ಮಾಣದ ದೂರದೃಷ್ಟಿಯನ್ನು ಹೊಂದಿರುವ ನರೇಂದ್ರಮೋದಿಯವರಿಗೆ ಶಕ್ತಿ ತುಂಬುವ ಸಲುವಾಗಿ, ನನಗೆ ಮತ ನೀಡಿ ಎಂದು ಮನವಿ ಮಾಡಿದ ಯದುವೀರ್ ಅವರು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ಶಾಸಕ ಜಿ.ಡಿ.ಹರೀಶ್‌ಗೌಡ ಹಾಗೂ ದೇವರಾಜ ಅರಸರ ಮೊಮ್ಮಗ ಮಂಜುನಾಥ ಅರಸ್ ಮಾತನಾಡಿ ಯದುವೀರರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ದೇವರಾಜ ಒಡೆಯರ್, ನಗರಸಭೆ ಸದಸ್ಯರಾದ ವಿವೇಕಾನಂದ, ಕೃಷ್ಣರಾಜಗುಪ್ತ, ರಾಣಿಪೆರುಮಾಳ್, ಹರೀಶ್ ಸೇರಿದಂತೆ ಕಾರ್ಯಕರ್ತರು ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.











