ಕುಶಾಲನಗರ ಏ.27 NEWS DESK : ಮುಕ್ತ ಮನಸು, ಮಹತ್ವಾಕಾಂಕ್ಷೆ, ನಮ್ರತೆ ಮತ್ತು ಸಾಮಿಪ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು, ದೇಶದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು, ಸ್ಥಳೀಯ ಕಲಾ ಪ್ರಕಾರಗಳನ್ನು ಅನ್ವೇಷಿಸಲು ಸೈನಿಕ ಶಾಲಾ ಸೊಸೈಟಿ ತಪಾಸಣಾ ಅಧಿಕಾರಿ ಕಮಡೋರ್ ರಾಜೇಶ್ ಕೆ.ಶರ್ಮಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನವದೆಹಲಿಯಿಂದ ಕೊಡಗು ಸೈನಿಕ ಶಾಲೆಗೆ ಆಗಮಿಸಿ, ಶಾಲೆಯ ಕುವೆಂಪು ವಿವಿದೊದ್ಧೇಶ ಸಭಾಂಗಣದಲ್ಲಿ ನಡೆದ 2024-25ನೇ ಸಾಲಿನ ನೂತನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಾಲೆಯಲ್ಲಿನ `ಯುದ್ಧ ವೀರರ ಸ್ಮಾರಕಕ್ಕೆ’ ಪುಷ್ಟಾರ್ಚನೆ ಸಲ್ಲಿಸುವುದರ ಮೂಲಕ ಯುದ್ಧ ವೀರರಿಗೆ ಗೌರವ ವಂದನೆ ಸಲ್ಲಿಸಿದರು.
ನಂತರ ಸರ್ಕಾರದ ಅನುದಾನದ ಬಳಕೆ ಮತ್ತು ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳು ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಕ್ರೀಡಾ ಚಟುವಟಿಕೆಗಳು ಮತ್ತು ಸೌಲಭ್ಯಗಳು, ಕುದುರೆ ಸವಾರಿ ಅಖಾಡ ಮತ್ತು ಸ್ಕೇಟಿಂಗ್ ರಿಂಕ್ ಸೇರಿದಂತೆ ವಿವಿಧ ಶೈಕ್ಷಣಿಕ ಮತ್ತು ತರಬೇತಿ ಚಟುವಟಿಕೆಗಳನ್ನು ಪರಿಶೀಲಿಸಿದರು.
ಎನ್.ಡಿ.ಎ ಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಯು.ಪಿ.ಎಸ್.ಸಿ – ಎನ್.ಡಿ.ಎ ಪರೀಕ್ಷೆಯ ತಯಾರಿಯಲ್ಲಿ ಶಾಲೆಯ ಕೊಡುಗೆಯ ಮಾಹಿತಿ ಪಡೆದರು.
ಹತ್ತನೇ ಮತ್ತು ಹನ್ನೆರಡನೇ ತರಗತಿಯ ಸಿ.ಬಿ.ಎಸ್.ಸಿ ಬೋರ್ಡ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪ್ರಶಂಸಿ, ಶಾಲೆಯ ವಿದ್ಯಾರ್ಥಿಗಳ ಎನ್.ಡಿ.ಎ ಗೆ ಸೇರ್ಪಡೆಯ ಸಂಖ್ಯೆಯನ್ನು ಹೆಚ್ಚಿಸಲು ಶಾಲೆಯು ಅನುಸರಿಸಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದರು.
ಪದಗ್ರಹಣಗೊಂಡ ವಿದ್ಯಾರ್ಥಿ ನಾಯಕರು ಶಾಲೆಯ ಧ್ಯೇಯ ವಾಕ್ಯವಾದ ವೀರತೆ, ದೃಢತೆ ಮತ್ತು ಪ್ರಾಮಾಣಿಕತೆಯನ್ನು ಉನ್ನತ ಹಂತದಲ್ಲಿ ಗೌರವಯುತವಾಗಿ ಎತ್ತಿಹಿಡಿಯಲು ಮತ್ತು ತಮ್ಮ ಸಾಮಥ್ರ್ಯ, ವಿಶ್ವಾಸದೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯ ಅತಿಥಿಗಳು ವಿದ್ಯಾರ್ಥಿಗಳ ಭುಜದ ಮೇಲಿನ ಬ್ಯಾಡ್ಜ್ ಅನಾವರಣಗೊಳಿದರು.
ಕೆಡೆಟ್ ಆದಿತ್ಯ ಕುಮಾರ್ ಶಾಲೆಯ ವಿದ್ಯಾರ್ಥಿ ನಾಯಕನಾಗಿ ಅಧಿಕಾರ ವಹಿಸಿಕೊಂಡರು.
ಶಾಲೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮನ್ಪ್ರೀತ್ ಸಿಂಗ್, ಹಿರಿಯ ಶಿಕ್ಷಕ ವಿಬಿನ್ ಕುಮಾರ್, ಬೋಧಕ ಬೋಧಕೇತರ ಸಿಬ್ಬಂದಿ, ಎನ್ಸಿಸಿ ಮತ್ತು ದೈಹಿಕ ಶಿಕ್ಷಕವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೆಡೆಟ್ ದೀಪ್ತಿ ಮತ್ತು ತಂಡದವರು ಸ್ವಾಗತ ನೃತ್ಯ ಪ್ರದರ್ಶಿಸಿದರು. ಕೆಡೆಟ್ ರಾಮನ್ ಮತ್ತು ತಂಡದಿಂದ ಸ್ವಾಗತ ಗೀತೆ ಹಾಡಿದರು.
ವರದಿ : ಎನ್.ಎ.ಅಶ್ವಥ್ ಕುಮಾರ್ (ಕುಶಾಲನಗರ)