ಮಡಿಕೇರಿ ಏ.27 NEWS DESK : ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಭದ್ರಗೊಳಿಸಬಲ್ಲ ದೇಶದ ಪ್ರಜಾತಂತ್ರದ ಹಬ್ಬಕ್ಕೆ ಮತದಾರರು ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಇರುವುದರಿಂದ ಮತದಾನದ ಪ್ರಮಾಣ ಕುಸಿಯುತ್ತಿದೆ. ಇದು ಅತ್ಯಂತ ವಿಷಾದನೀಯವೆಂದು ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ.ರವಿ ಅವರು, ಈ ದೇಶದ ಪ್ರಜೆಗಳು ಯಾರೇ ಆಗಿರಲಿ ಮತ ಚಲಾಯಿಸದೆ ಇರುವವರಿಗೆ ಯಾವುದೇ ಸರಕಾರಿ ಸೌಲಭ್ಯವನ್ನು ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಉಜ್ವಲ ಭವಿಷ್ಯಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆ ಮತದಾನ ಮಾಡುವುದು ಅತ್ಯಗತ್ಯವಾಗಿದೆ. ಆದರೆ ಈ ಬಾರಿಯ ಮಹಾ ಚುನಾವಣೆಯಲ್ಲಿ ಮತದಾರ ತನ್ನ ಜವಾಬ್ದಾರಿಯನ್ನು ಮರೆತಿರುವುದು ಸ್ಪಷ್ಟವಾಗಿದೆ. ಶೇಕಡಾವಾರು ಮತದಾನ ಅಧಿಕವಾಗಲಿ ಎಂದು ಸರಕಾರ ಸಾರ್ವತ್ರಿಕ ರಜೆಯನ್ನು ಘೋಷಿಸಿದರೂ ಮತದಾರರು ರಜೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಿರೀಕ್ಷೆಯಷ್ಟು ಮತ ಚಲಾವಣೆಯಾಗದೆ ಇರುವುದೇ ಇದಕ್ಕೆ ಮುಖ್ಯ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಸ್ಥಿರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮತದಾನ ಎಂಬುವುದು ಪ್ರಜೆಗಳಿಗಿರುವ ಬಹುದೊಡ್ಡ ಅಧಿಕಾರವಾಗಿದೆ. ಮತದಾನವು ನಮ್ಮ ಹಕ್ಕು ಮಾತ್ರವಲ್ಲ ನಮ್ಮ ಕರ್ತವ್ಯವೂ ಹೌದು. ದೇಶದ ನಾಗರೀಕರಾಗಿ ನಮಗೂ ಮತ ಚಲಾಯಿಸುವ ದೊಡ್ಡ ಜವಾಬ್ದಾರಿ ಇದೆ. ದೇಶದ ಸುಭದ್ರತೆಗೆ ಸರಿಯಾದ ವ್ಯಕ್ತಿಗಳನ್ನು ಆಯ್ಕೆ ಮಾಡದೇ ಇದ್ದರೆ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾರರೇ ಹಕ್ಕು ಚಲಾವಣೆಗೆ ನಿರಾಸಕ್ತಿ ತೋರಿದರೆ ಪ್ರಜಾತಂತ್ರ ವ್ಯವಸ್ಥೆ ಮತ್ತಷ್ಟು ಗಟ್ಟಿಯಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಮತದಾನವು ಪ್ರತಿ ಪ್ರಜೆಯ ಹಕ್ಕು ಮತ್ತು ಕರ್ತವ್ಯ. ಯಾವುದೇ ಜಾತಿ ಮತ ಧರ್ಮ ಪಕ್ಷ ಬೇಧವಿಲ್ಲದೆ ನಿರ್ಭೀತಿಯಿಂದ ದೇಶದ ಏಳಿಗೆಗೋಸ್ಕರ ಮತ ಚಲಾಯಿಸಬೇಕಾಗಿದೆ. ಚುನಾವಣೆಯಲ್ಲಿ ಎಲ್ಲಾ ಮತದಾರರು ತಮ್ಮ ಮತಗಳ ಮೂಲಕ ಹಕ್ಕು ಚಲಾಯಿಸಿದಾಗ ಮಾತ್ರವೇ ಪ್ರಜಾಪ್ರಭುತ್ವದ ಗೌರವ, ಘನತೆ ಉಳಿಯಲು ಸಾಧ್ಯ.
ವಯೋವೃದ್ಧರಿಗೆ ತಮ್ಮ ಮನೆಯಲ್ಲಿ ಮತದಾನ ಮಾಡುವ ಹಕ್ಕನ್ನು ನೀಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ಮಾಡುವ ಸಿಬ್ಬಂದಿಗಳಿಗೆ ಅಂಚೆ ಮೂಲಕ ಮತದಾನದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತಗಳು ಶೇಕಡ ನೂರರಷ್ಟು ಮತದಾನಕ್ಕಾಗಿ ಅನೇಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಅಭಿಯಾನ ನಡೆಸಿವೆ. ರಜೆಯನ್ನೂ ನೀಡಲಾಗಿದೆ, ಆದರೆ ಶೇ.90 ಕ್ಕಿಂತ ಹೆಚ್ಚು ಮತ ಚಲಾವಣೆ ಎಲ್ಲೂ ಆಗುತ್ತಿಲ್ಲ.
ಬೆಂಗಳೂರು ಮಹಾನಗರದಲ್ಲಿ ಶೇ.53ರಷ್ಟು ಮಾತ್ರ ಮತದಾನವಾಗಿದ್ದು, ಇದು ಮುಜುಗರದ ವಿಚಾರವಾಗಿದೆ. ರಜೆಯನ್ನು ಮೋಜು ಮಸ್ತಿಗಾಗಿ ಯುವ ಮತದಾರರು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸಂಶಯವಿದೆ. ಮತದಾನವನ್ನು ಸಂಭ್ರಮಿಸಿದಾಗ ಮಾತ್ರ ದೇಶ ಬದಲಾಗುತ್ತದೆ. ರಾಷ್ಟ್ರಪ್ರೇಮ ಇರುವವರು ಖಂಡಿತವಾಗಿಯೂ ಸೂಕ್ತ ನಾಯಕನನ್ನು ಆಯ್ಕೆ ಮಾಡುತ್ತಾರೆ. ತಾನು ನೀಡುವ ಪ್ರತಿಯೊಂದು ಮತವು ಸದೃಢ ಭಾರತದ ನಿರ್ಮಾಣಕ್ಕೆ ಬುನಾದಿ ಎನ್ನುವುದನ್ನು ಯಾರೂ ಮರೆಯಬಾರದು.
ಇನ್ನು ಮುಂದೆಯಾದರೂ ಸಾರ್ವತ್ರಿಕ ರಜೆ ನೀಡಿದರೂ ಮತ ಚಲಾಯಿಸದೆ ಇರುವವರ ಬಗ್ಗೆ ಕ್ರಮ ಕೈಗೊಳ್ಳುವ ಮತ್ತು ಸರಕಾರಿ ಸೌಲಭ್ಯಗಳನ್ನು ಕಡಿತಗೊಳಿಸುವ ಕಾನೂನನ್ನು ಜಾರಿಗೆ ತರಬೇಕು ಎಂದು ಪಿ.ಎಂ.ರವಿ ಒತ್ತಾಯಿಸಿದ್ದಾರೆ.