ಮಡಿಕೇರಿ ಮೇ 3 NEWS DESK : ಇತ್ತೀಚಿನ ದಿನಗಳಲ್ಲಿ ದಾಖಲೆಯ ತಾಪಮಾನವನ್ನು ದಾಖಲಿಸಿಕೊಂಡಿದ್ದ ಕೊಡಗು ಜಿಲ್ಲೆಯಾದ್ಯಂತ ಇಂದು ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಯೂ ನಡೆದಿದೆ. ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ನಾಪೋಕ್ಲು, ಕುಶಾಲನಗರ, ಕೊಪ್ಪ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ರಭಸವಾಗಿ ಗಾಳಿ ಬೀಸಿದ ಪರಿಣಾಮ ಕೆಲವು ಕಡೆ ಹಾನಿ ಸಂಭವಿಸಿದೆ. ಸಿಡಿಲು ಬಡಿದು ಅಸ್ಸಾಂ ಮೂಲದ ತೋಟದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ಅಸ್ಸಾಂ ಮೂಲದ ಪ್ರಮಾತ್ ಗರ್ಮಾನಿ(37) ಮೃತ ದುರ್ದೈವಿ. ಬೆಟ್ಟಗೇರಿ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕ ಶುಕ್ರವಾರ ಸಂಜೆ ಮಳೆ ಸುರಿಯುವ ಸಂದರ್ಭ ಮನೆಯಿಂದ ಹೊರ ಬಂದಿದ್ದ ಎನ್ನಲಾಗಿದೆ. ಈ ವೇಳೆ ಸಿಡಿಲು ಬಡಿದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ತಕ್ಷಣವೇ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೊಡಗಿನ ಪಕ್ಕದ ಊರುಗಳಾದ ಪಿರಿಯಾಪಟ್ಟಣ, ಹುಣುಸೂರು ಮತ್ತು ಮೈಸೂರಿನಲ್ಲೂ ಗಾಳಿ ಸಹಿತ ಮಳೆಯಾಗಿದೆ. ಸಾಲು ಸಾಲು ವಿದ್ಯುತ್ ಕಂಬಗಳು, ಮರಗಳು ಬಿದ್ದಿವೆ. ಹಲವು ವಾಹನಗಳು ಜಖಂಗೊಂಡಿವೆ. ಅತಿಯಾದ ಉಷ್ಣಾಂಶದಿಂದ ಬಸವಳಿದಿದ್ದ ಜನ ಧಾರಾಕಾರವಾಗಿ ಸುರಿದ ಮಳೆಯಿಂದ ಕೊಂಚ ನೆಮ್ಮದಿ ಅನುಭವಿಸಿದರಾದರೂ ದಿಢೀರ್ ಮಳೆಯಿಂದ ಹಾನಿ ಸಂಭವಿಸುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.