ಮಡಿಕೇರಿ ಮೇ 14 NEWS DESK : ಜಾನಪದ ಬ್ರಹ್ಮ ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜನ್ಮದಿನದ ಅಂಗವಾಗಿ ಮುಂದಿನ ವರ್ಷ ಏಪ್ರಿಲ್‍ನಲ್ಲಿ ನಡೆಯುವ ಕೊಡವ ಜಾನಪದ ನಮ್ಮೆಗೆ ನಡಿಕೇರಿಯಂಡ ಬಲ್ಯಮನೆಯಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಚಾಲನೆ ನೀಡಿದರು.
ಕೊಡವಾಮೆರ ಕೊಂಡಾಟ ಸಂಘಟನೆಯ ನೇತೃತ್ವದಲ್ಲಿ ಕರಡ ಗ್ರಾಮದ ನಡಿಕೇರಿಯಂಡ ಬಲ್ಯಮನೆಯಲ್ಲಿ ನೆಲ್ಲಕ್ಕಿ ನಡುಬಾಡೆಯಲ್ಲಿ ಒಕ್ಕಣೆ ಕಟ್ಟಿ ಅಕ್ಕಿ ಹಾಕುವ ಮೂಲಕ ಚಾಲನೆ ನೀಡಿದರು.
ನಡಿಕೇರಿಯಂಡ ಒಕ್ಕ ಬಲ್ಯಮನೆಗೆ ಸೇರಿದ ಕೊಡವಾಮೆರ ಕೊಂಡಾಟ ಸಂಘಟನೆಯ ಪದಾಧಿಕಾರಿಗಳನ್ನ ನಡಿಕೇರಿಯಂಡ ಒಕ್ಕ ಪ್ರಮುಖರು ಕೊಡವ ಸಂಪ್ರದಾಯಿಕವಾಗಿ ಸ್ವಾಗತಿಸಿದರು.
ನಂತರ ನಡಿಕೇರಿಯಂಡ ಒಕ್ಕ ಕೈಮಡಕ್ಕೆ ತೆರಳಿ ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಹಾಗೂ ಒಕ್ಕ ಸದಸ್ಯರು, ನಡಿಕೇರಿಯಂಡ ಗುರು ಕಾರೋಣರು, ಕೊಡಗಿನ ಎಲ್ಲಾ ಒಕ್ಕಕಾರೋಣರು, ಇಗ್ಗುತಪ್ಪ ಕಾವೇರಮ್ಮೆ ಮತ್ತು ಕೊಡವು ನಾಡಿನ ಎಲ್ಲಾ ದೇವಾನು ದೇವತೆಯರನ್ನ ಪ್ರಾರ್ಥಿಸಿ, ಕೊಡವ ಜಾನಪದ ನಮ್ಮೆಯ ಯಶಸ್ಸಿಗೆ ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಕೊಡವಾಮೆರ ಸಂಘಟನೆಯು ಕೊಡವ ಮೂಲ ಪದ್ಧತಿಯಂತೆ ಎಲೆತಟ್ಟೆಯಲ್ಲಿ ಪೆÇರಿಯಕ್ಕಿ, ತೆಂಗೆ, ಬೆಲ್ಲ, ಕೊಡಿಎಲೆ, ಅಡಿಕೆಯೊಂದಿಗೆ, ಜಾನಪದ ನಮ್ಮೆಗೆ ನಡಿಕೇರಿಯಂಡ ಒಕ್ಕದ ಸಾಕಾರ ಕೋರಿದರು. ಪ್ರತಿಯಾಗಿ ನಡಿಕೇರಿಯಂಡ ಒಕ್ಕ ಸದಸ್ಯರು ತಮ್ಮ ಒಕ್ಕೊರಳ ಸಹಮತ ವ್ಯಕ್ತಪಡಿಸಿದರು.
ನಂತರ ನಡಿಕೇರಿಯಂಡ ಬಲ್ಯಮನೆಯ ಕಯ್ಯಾಲೆಯಲ್ಲಿ ಕೊಡವಾಮೆರ ಕೊಂಡಾಟ ಮತ್ತು ನಡಿಕೇರಿಯಂಡ ಒಕ್ಕ ಸದಸ್ಯರು ಜಾನಪದ ನಮ್ಮೆಯ ಕುರಿತು ಪೂರ್ವಭಾವಿ ಸಭೆ ನಡೆಸಿದರು.
ಚಾಮೆರ ದಿನೇಶ್ ಕಾರ್ಯಕ್ರಮದ ರೂಪುರೇಷೆ ಮತ್ತು ಉದ್ದೇಶದ ಕುರಿತು ಕೂಲಂಕುಶ ಮಾಹಿತಿ ನೀಡಿದರೆ, ನಡಿಕೇರಿಯಂಡ ಒಕ್ಕ ಸದಸ್ಯರು ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರ ಘೋಷಿಸಿದರು. ನಂತರ ನಡಿಕೇರಿಯಂಡ ಒಕ್ಕವು ಕೊಡವಾಮೆರ ಕೊಂಡಾಟ ಸಂಘಟನೆ ಪದಾಧಿಕಾರಿಗಳನ್ನು ಗೌರವದೊಂದಿಗೆ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆ ಉಪಾಧ್ಯಕ್ಷೆ ಕುಲ್ಲಚಂಡ ವಿನುತಕೇಸರಿ, ಕಾರ್ಯದರ್ಶಿ ಕುಂಞರ ಗಿರೀಶ್‍ಭಿಮಯ್ಯ, ಸಹಕಾರ್ಯದರ್ಶಿ ಮಲ್ಲಂಡ ದರ್ಶನ್ ಮುತ್ತಪ್ಪ, ನಿರ್ದೇಶಕರಾದ ಅಜ್ಜಮಕ್ಕಡ ವಿನು ಕುಶಾಲಪ್ಪ, ಚಾಮೆರ ಪ್ರಿಯ ದಿನೇಶ್, ನಡಿಕೇರಿಯಂಡ ಒಕ್ಕ ಅಧ್ಯಕ್ಷ ನಡಿಕೇರಿಯಂಡ ಕಿಶೋರ್ ತಿಮ್ಮಯ್ಯ, ಪಟ್ಟೋಲೆಪಳಮೆ ಸಂಪಾದಕ ನಡಿಕೇರಿಯಂಡ ಚಿಣ್ಣಪ್ಪ ಅವರ ಮರಿಮಗ, ನಡಿಕೇರಿಯಂಡ ನೀರಜ್ ಚಿಣ್ಣಪ್ಪ ಕುಟುಂಬ ಪ್ರಮುಖರಾದ ಸೋಮಯ್ಯ, ತಮ್ಮಯ್ಯ, ಬೋಸ್ ಮಂದಣ್ಣ, ಅಚ್ಚಯ್ಯ, ನಂದ, ಸುಬ್ಬಯ್ಯ, ಚಿಣ್ಣಪ್ಪ, ಮಾಚಯ್ಯ, ತಿಮ್ಮಯ್ಯ ಸೆರಿದಂತೆ ಕುಟುಂಬದ ಮಹಿಳೆಯರು ಮಕ್ಕಳು ಹಾಜರಿದ್ದರು.