ಸೋಮವಾರಪೇಟೆ ಮೇ 15 NEWS DESK : ರೋಟರಿ ಸಂಸ್ಥೆಯ ವತಿಯಿಂದ ಜಿಲ್ಲೆಯಲ್ಲಿ 100 ಅಂಗನವಾಡಿಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಎಚ್.ಆರ್.ಕೇಶವ್ ಹೇಳಿದರು.
ರೋಟರಿ ಹಾಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ಅಂಗನವಾಡಿಗಳು ಮಗುವಿನ ಮೊದಲ ಪಾಠಶಾಲೆಯಾಗಿವೆ. ಅಂಗನವಾಡಿ ಶಿಕ್ಷಕಿಯೇ ಮೊದಲು ಗುರುವಾಗಿದ್ದಾರೆ. ಪೋಷಕರು ಕೆಲಸದ ಒತ್ತಡದಿಂದ ಒಂದು ವರ್ಷಕ್ಕೆ ಮಗುವನ್ನು ಅಂಗನವಾಡಿಗೆ ಸೇರಿಸುವಂತೆ ಪರಿಸ್ಥಿತಿ ಬಂದಿದ್ದು, ಅಂಗನವಾಡಿಗಳಿಗೆ ಸೌಲಭ್ಯಗಳನ್ನು ಒದಗಿಸಿದರೆ ಮಕ್ಕಳ ಬೆಳವಣಿಗೆಗೆ ಉಪಯೋಗವಾಗಲಿದೆ ಎಂದು ಹೇಳಿದರು.
ಅಂಗನವಾಡಿಗಳ ಕಟ್ಟಡ ದುರಸ್ತಿ, ಶೌಚಾಲಯ, ಪೀಠೋಪಕರಣ, ಕ್ರೀಡಾ ಆಟಿಕೆಗಳು, ಅಡಿಗೆಪಾತ್ರೆಗಳನ್ನು ಖರೀದಿಸಿ ಕೊಡಲಾಗುವುದು ಎಂದು ಹೇಳಿದರು.
ಸೋಮವಾರಪೇಟೆ ರೋಟರಿ ಹಿಲ್ಸ್ ಅತ್ಯುತ್ತಮ ಕ್ಲಬ್ ಆಗಿದೆ. ಅನೇಕ ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡಿದೆ. ಸಾರ್ವಜನಿಕ ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ನಿರ್ಮಾಣ ಮಾಡಿದ್ದಾರೆ. ಬಜೆಗುಂಡಿಯಲ್ಲಿ ಪ್ರಯಾಣಿಕರ ತಂಗುದಾಣ ಉದ್ಘಾಟನೆಯಾಗಿದೆ. ಶವಪೆಟ್ಟಿಗೆ(ಐಸ್ ಬಾಕ್ಸ್) ಖರೀದಿಸಿ ಸಾರ್ವಜನಿಕರ ಉಪಯೋಗಕ್ಕೆ ಸರ್ಕಾರಿ ಆಸ್ಪತ್ರೆಗೆ ನೀಡಲಾಗುವುದು ಎಂದು ಹೇಳಿದರು.
ರೋಟರಿ ಸಂಸ್ಥೆಗೆ 120 ವರ್ಷಗಳ ಇತಿಹಾಸವಿದ್ದು, ಪ್ರಪಂಚದ 200 ದೇಶಗಳಲ್ಲಿ ರೋಟರಿ ಸಂಸ್ಥೆಗಳು ಸಮಾಜಸೇವೆಯಲ್ಲಿ ತೊಡಗಿಕೊಂಡಿವೆ. ಪೊಲೀಯೋ ನಿರ್ಮೂಲನ ಕಾರ್ಯದಲ್ಲಿ ಯಶಸ್ಸು ಗಳಿಸಿದೆ. ಪಾಕಿಸ್ಥಾನ ಮತ್ತು ಅಪ್ಘಾನಿಸ್ತಾನದಲ್ಲಿ ಹೊರತುಪಡಿಸಿ, ಪ್ರಪಂಚವೇ ಪೊಲೀಯೋ ಮುಕ್ತವಾಗಿದೆ.
3181 ರೋಟರಿ ಜಿಲ್ಲೆಗೆ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಜಿಲ್ಲೆಗಳು ಸೇರಿದ್ದು, 88 ಕ್ಲಬ್ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಸದಸ್ಯರು ಸಮಾಜ ಸೇವೆ ಒಂದಿಷ್ಟು ಸಮಯವನ್ನು ವಿನಿಯೋಗಿಸುವುದರೊಂದಿಗೆ ಸಂಸ್ಥೆಗೆ ಧನ ಸಹಾಯ ಮಾಡುತ್ತಿದ್ದಾರೆ. ದಾನಿಗಳ ಹಣ ಬಡವರ ಉದ್ದಾರಕ್ಕೆ ವಿನಿಯೋಗವಾಗುತ್ತಿದೆ ಎಂದು ಪ್ರಶಂಸೆಯ ಮಾತನಾಡಿದರು.
ಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ವಸಂತ್ ನಂಗಾರು, ಸಹಾಯಕ ರಾಜ್ಯಪಾಲ ಎಂ.ಡಿ. ಲಿಖಿತ್, ವಲಯ ಸೇನಾನಿ ಉಲ್ಲಾಸ್ ಕೃಷ್ಣ, ಕ್ಲಬ್ ಕಾರ್ಯದರ್ಶಿ ಚೇತನ್ ಚಂದ್ರಾಜು, ಮಾಜಿ ಸಹಾಯಕ ಪ್ರಾಂತಪಾಲ ಪಿ.ಕೆ.ರವಿ ಇದ್ದರು.