ಸೋಮವಾರಪೇಟೆ ಮೇ 20 NEWS DESK : ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರಕ್ಕೂ ಹೆಚ್ಚು ಒತ್ತು ನೀಡಿದರೆ ಉತ್ತಮ ಸಾಧನೆ ಮಾಡಬಹುದು ಎಂದು ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಿಸಿದರು.
ತಾಲ್ಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ವತಿಯಿಂದ ಪಟ್ಟಣದಲ್ಲಿರುವ ಹಾಕಿ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಆರ್ಹತಾ ಪತ್ರ ವಿತರಿಸಿ ಮಾತನಾಡಿದರು.
ಕ್ರೀಡಾಕ್ಷೇತ್ರದಲ್ಲಿ ಆಸಕ್ತಿಯಿರುವ ಮಕ್ಕಳಿಗೆ ನಾವುಗಳು ಪ್ರೋತ್ಸಾಹ ನೀಡಬೇಕು. ಸಿಕ್ಕ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಡಿಸಿಕೊಳ್ಳಬೇಕು ಎಂದು ಹೇಳಿದರು.
ಕೊಡಗಿನಲ್ಲಿ ಹಾಕಿ ಎಂಬುದು ರಕ್ತದಲ್ಲಿದೆ. ಇಲ್ಲಿನ ಮೈದಾನದಲ್ಲಿ ಆಟವಾಡಿದ ಹಾಕಿ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅಂತಹ ಪ್ರತಿಭಾವಂತರು ಸೃಷ್ಟಿಯಾಗಬೇಕಿದೆ. ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಹುಡುಕಿ ತರಬೇತಿ ನೀಡಬೇಕು. ಸಿಂಥೆಟಿಕ್ ಟರ್ಫ್ ಮೈದಾನ ಉಪಯೋಗವಾಗಬೇಕು. ಕ್ರೀಡಾ ಇಲಾಖೆಯವರು ಹಾಕಿ ಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಅವರು ಮಾತನಾಡಿ, ಸಿಂಥೆಟಿಕ್ ಟರ್ಫ್ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ಇಲಾಖೆ ನಿಭಾಯಿಸಬೇಕು. ಹೆಚ್ಚಿನ ಖರ್ಚುವೆಚ್ಚಗಳನ್ನು ಭರಿಸಬೇಕಾಗಿದೆ. ಒಂದಷ್ಟು ಅಭಿವೃದ್ಧಿ ಕೆಲಸ ಆಗಬೇಕಿದೆ. ಶಾಸಕರ ಸಹಕಾರದಿಂದ ಸರ್ಕಾರದ ಮಟ್ಟದಲ್ಲೂ ಅನುದಾನ ಸಿಗುತ್ತಿದೆ. ಈಗಾಗಲೇ ಎರಡನೇ ಹಾಕಿ ಶಿಬಿರ ನಡೆದಿದೆ. ರಿಯಾಯಿತಿ ಶುಲ್ಕದಲ್ಲಿ ಮೈದಾನ ನೀಡಲಾಗುವುದು. ಸಂಘಸಂಸ್ಥೆಗಳು ಉಚಿತವಾಗಿ ಟರ್ಫ್ ಮೈದಾನವನ್ನು ಕೇಳಬಾರದು ಎಂದು ಮನವಿ ಮಾಡಿದರು.
ಕುವೆಂಪು ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಮಿಲ್‍ಡ್ರೆಡ್ ಗೋನ್ಸಾಲ್ವೆಸ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಮೊಬೈಲ್‍ಗಳಿಗೆ ಮಾರುಹೋಗಿದ್ದಾರೆ. ಆಟದ ಕಡೆ ಗಮನ ನೀಡುತ್ತಿಲ್ಲ. ಪೋಷಕರು ಕೂಡ ದೈಹಿಕ ಕಸರತ್ತಿಗೆ ಸಮಯ ಕೊಡುತ್ತಿಲ್ಲ. ಈ ಕಾರಣದಿಂದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪ್ರತಿನಿತ್ಯ ಅವಶ್ಯಕವಿರುವಷ್ಟು ದೈಹಿಕ ಕಸರತ್ತು ಮಾಡಬೇಕು. ವಿದ್ಯಾರ್ಥಿಗಳ ಆಟೋಟಗಳಲ್ಲಿ ಪಾಲ್ಗೊಳ್ಳಲೇಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಒಕ್ಕಲಿಗರ ಯುವವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಡಾಲ್ಫೀನ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಎಚ್.ಎನ್.ಅಶೋಕ್, ಹಿರಿಯ ಹಾಕಿ ಆಟಗಾರರಾದ ಹಾಲಪ್ಪ, ಬಿ.ಎಂ.ಸುರೇಶ್, ಪ್ರಮುಖರಾದ ಕೆ.ಎಂ.ಜಗದೀಶ್, ನಂದಕುಮಾರ್, ಲಿಂಗರಾಜು, ಕೋಚ್‍ಗಳಾದ ಪ್ರಕಾಶ್, ವೆಂಕಟೇಶ್, ಸುರೇಶ್, ಅಂತೋಣಿ ಡಿಸೋಜ, ಇಂದಿರಾ ಇದ್ದರು. ಶಿಕ್ಷಕಿ ಸೌಮ್ಯ ಸ್ವಾಗತಿಸಿದರು.