ಮಡಿಕೇರಿ ಮೇ 22 NEWS DESK : ವಿಶಾಲವಾದ ಮರಗಳ ನೆರಳಿನಲ್ಲಿ ಹಾಗೂ ಪಶ್ಚಿಮ ಘಟ್ಟಗಳ ಕಾವಲಿನ ಅಡಿಯಲ್ಲಿ, ಕೊಡಗಿನ ಹಾಕಿಯ ಇತಿಹಾಸದ ಪಯಣವನ್ನು ಆರಂಭಿಸಿದಾಗ, ಈ ದಾರಿಯನ್ನು ಸುಗಮಗೊಳಿಸಿದವರನ್ನು ನೆನೆಯುತ್ತಾ, ಕೊಡಗಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹಾಕಿ ಆಟಗಾರರಲ್ಲಿ ಕರ್ತಮಾಡ ರಿಕ್ಕಿ ಗಣಪತಿಯವರು ಕೂಡ ಒಬ್ಬರು.
ಬಿರುನಾಣಿ ಗ್ರಾಮದ ದಿವಂಗತ ಕರ್ತಮಾಡ ಚಂಗಪ್ಪ ಹಾಗೂ ಸ್ವಾತಿ (ತಾಮನೆ ಮನೆಯಪಂಡ) ದಂಪತಿಯರ ಪುತ್ರನಾಗಿ ರಿಕ್ಕಿ ಗಣಪತಿಯವರು 29 ಮಾರ್ಚ್ 1968ರಂದು ಜನಿಸಿದರು. ಗೋಣಿಕೊಪ್ಪಲು ಸೆಂಟ್ ಥಾಮಸ್ ಶಾಲೆಯಲ್ಲಿ ಓದುತ್ತಿರುವಾಗಲೇ, ಪೊನ್ನಂಪೇಟೆಯ ಪುಚ್ಚಿಮಾಡ ಹರೀಶ್ ಮಾಸ್ಟರ್ ಅವರ ತರಬೇತಿಯಲ್ಲಿ ಹಾಕಿಯ ಭವಿಷ್ಯಕ್ಕೆ ಮುನ್ನುಡಿ ಬರೆದರು.
ಪ್ರೌಢ ಶಿಕ್ಷಣವನ್ನು ಪೊನ್ನಂಪೇಟೆ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಅಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ದೇವಯ್ಯನವರು ಇವರಿಗೆ ಹಾಕಿಯ ತರಬೇತಿಯಲ್ಲಿ ಮಾರ್ಗದರ್ಶನ ನೀಡಿದರು. ಇವರು ಪದವಿಯನ್ನು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪಡೆದರು. ಕಾಲೇಜು ದಿನಗಳಲ್ಲಿಯೂ ಅನೇಕ ಹಾಕಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು. ನಂತರ ಮ್ಯಾಥ್ಯೂ ಜೇಕಬ್ ಅವರ ತರಬೇತಿಯಿಂದ ಮಂಗಳೂರು ಕ್ರೀಡಾ ಶಾಲೆಗೆ ಸೇರಿದರು.
ಕ್ರೀಡಾ ಸಾಧನೆ :: 1988ರ ಮುಂಬೈ, 1989ರ ಮಧ್ಯಪ್ರದೇಶ, 1990 ಜಮ್ಮು ಮತ್ತು ಕಾಶ್ಮೀರ, 1992ರ ರಾಜಸ್ಥಾನ ಮತ್ತು 1993ರ ಮುಂಬೈನಲ್ಲಿ ನಡೆದ ಹಿರಿಯರ ರಾಷ್ಟ್ರೀಯ ಹಾಕಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
1988ರ ಆಂಧ್ರಪ್ರದೇಶ, 1989ರ ಹೈದರಾಬಾದ್, 1993ರ ಕೊಡಗು ಹಾಗೂ 1995ರ ಕೇರಳದಲ್ಲಿ ನಡೆದ ದಕ್ಷಿಣ ವಲಯದ ಹಾಕಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
1992 ಹಾಗೂ 1993 ರಲ್ಲಿ ಪಂಜಾಬ್ ನಲ್ಲಿ ನಡೆದ ಫೆಡರೇಶನ್ ಕಪ್, 1989 ಹಾಗೂ 1993ರಲ್ಲಿ ರಾಜಸ್ಥಾನದಲ್ಲಿ ನಡೆದ ಅಖಿಲ ಭಾರತ ಡಿ.ಸಿ.ಎಂ ಶ್ರೀರಾಮ್ ಹಾಕಿ ಪಂದ್ಯಾವಳಿ, 1992ರ ಚೆನ್ನೈನಲ್ಲಿ ನಡೆದ ಅಖಿಲ ಭಾರತ ಎಂ.ಸಿ.ಸಿ ಹಾಕಿ ಪಂದ್ಯಾಟ, ಕೊಲ್ಕತ್ತಾದಲ್ಲಿ ನಡೆದ ಬೇಟನ್ ಕಪ್ ಹಾಗು ದೆಹಲಿಯಲ್ಲಿ ನಡೆದ ನೆಹರು ಕಪ್ ಹೀಗೆ ಅನೇಕ ಪಂದ್ಯಾವಳಿಗಳಲ್ಲಿ ಕರ್ನಾಟಕದ ಪರ ಆಡಿದ ಕೀರ್ತಿ ಇವರದು.
ಹೆಸರುವಾಸಿ ಆಟಗಾರ :: ಕೊಡಗಿನಲ್ಲಿ ನಡೆದ ಅನೇಕ ಪ್ರತಿಷ್ಠಿತ ಕೌಟುಂಬಿಕ ಹಾಕಿ ಪಂದ್ಯಗಳಲ್ಲಿ ಆಡಿದ ಕೀರ್ತಿ ಇವರದು, ರಿಕ್ಕಿ ಅವರು ಉತ್ತಮ ಮುನ್ನಡೆ ಆಟಗಾರನೆಂದು ಖ್ಯಾತಿ ಪಡೆದಿದ್ದಾರೆ. ತನ್ನ ವಿಶೇಷ ಶೈಲಿಯ ಆಟದಿಂದ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುವ ಪರಿಣಿತ ಆಟಗಾರ.
:: ನೆಸ್ಲೆ ಇಂಡಿಯಾ :: ಅಂದಿನ ಪ್ರಥಮ ವರ್ಷದ ನೆಸ್ಲೆ ಕಪ್ ಅನ್ನು ಓಯಸಿಸ್ ಜೋಡುಪೆಟ್ಟಿ ತಂಡಕ್ಕೆ ಅದ್ಭುತವಾಗಿ ಆಡಿ ಕಪ್ ಅನ್ನು ಗೆದ್ದು ಕೊಟ್ಟರು.
:: ಹಾಕಿ ಕರ್ನಾಟಕ :: ಇವರು ಹಾಕಿ ಕರ್ನಾಟಕದ ಹಿರಿಯ ಉಪಾಧ್ಯಕ್ಷರು, ಕರ್ನಾಟಕ ಸೀನಿಯರ್ ತಂಡಕ್ಕೆ ತರಬೇತಿದಾರ ಹಾಗೂ ಮ್ಯಾನೇಜರ್ ಆಗಿದ್ದಾರೆ.
ಪ್ರಸ್ತುತ ಕೆನರಾ ಬ್ಯಾಂಕ್ ನ ಹಿರಿಯ ವ್ಯವಸ್ಥಾಪಕ ಹುದ್ದೆಯಲ್ಲಿದ್ದಾರೆ. ಕೆನರಾ ಬ್ಯಾಂಕ್ ಹಾಕಿ ತಂಡವನ್ನು ಕಟ್ಟಿ-ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ತಮ್ಮ ಪತ್ನಿ ರೂಪ ಹಾಗೂ ಮಕ್ಕಳಾದ ಧ್ರುವ್ ಉತ್ತಪ್ಪ ಹಾಗೂ ಆರ್ಯನ್ ಅಯ್ಯಣ್ಣ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
:: ಗಿನ್ನಿಸ್ ದಾಖಲೆಗೆ ಶುಭ ಹಾರೈಕೆ :: ಇತ್ತೀಚೆಗೆ ನಡೆದ ಕುಡ್ಯೋಳಂಡ ಹಾಕಿ ಹಬ್ಬವು ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಾ, ತಮ್ಮನೆಲ್ಲ ಕರೆದು ಸಮ್ಮಿಲನ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಾ, ಹಾಕಿ ಕರ್ನಾಟಕದ ವತಿಯಿಂದ ಕುಡ್ಯೋಳಂಡ ಕುಟುಂಬಕ್ಕೆ ಶುಭ ಕೋರಿದರು.
ಹಾಕಿಯಲ್ಲಿ ತನ್ನನ್ನು ಮೂರು ದಶಕಗಳಿಗಿಂತಲೂ ಹೆಚ್ಚಾಗಿ ತೊಡಗಿಸಿಕೊಂಡು, ಕೊಡಗಿನ ಹಾಕಿ ಕೂರ್ಗ್ ಮತ್ತು ಎಲ್ಲಾ ಹಾಕಿ ಆಟಗಾರರೊಡನೆ ಒಳ್ಳೆಯ ಸ್ನೇಹ ಸಂಬಂಧವನ್ನು ಹೊಂದಿದ್ದು, ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ, ಸದಾ ಸನ್ಮುಖಿ, ನಮ್ಮ ದೇಶದ ಹಿರಿಮೆ ಹಾಗೂ ಕೊಡಗಿನ ಗರಿಮೆಯನ್ನು ದೇಶದ ಉದ್ದಕ್ಕೂ ಸಾರಿದ್ದಾರೆ. ಇದೇ ರೀತಿ ಹಾಕಿಗೆ ಇನ್ನು ಹೆಚ್ಚು ಕೊಡುಗೆಗಳನ್ನು ನೀಡಲಿ ಹಾಗೂ ಕೊಡಗಿನ ಯುವ ಆಟಗಾರರನ್ನು ಯಶಸ್ಸಿನ ಹಾದಿಯತ್ತ ಕೊಂಡೊಯ್ಯಲಿ ಎಂಬುದು ಕ್ರೀಡಾಪ್ರೇಮಿಗಳ ಮನದಾಸೆ.
ಕ್ರೀಡಾ ವಿಶ್ಲೇಷಣೆ :: ಚೆಪ್ಪುಡೀರ ಕಾರ್ಯಪ್ಪ