ಮಡಿಕೇರಿ ಮೇ 24 NEWS DESK : ಸಮಯವನ್ನು ಹಾಳು ಮಾಡದೆ ಧನಾತ್ಮಕವಾಗಿ ಯೋಚಿಸುವ ಮೂಲಕ ವೈಯುಕ್ತಿಕ
ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಂತೆ ಮಡಿಕೇರಿ ರೋಟರಿಯ ಪ್ರಮುಖ ಎನ್.ಡಿ.ಅಚ್ಚಯ್ಯ ಕರೆ ನೀಡಿದ್ದಾರೆ.
ಮೈಸೂರು ಮಣಿಪಾಲ ಆಸ್ಪತ್ರೆ, ರೋಟರಿ ಮಡಿಕೇರಿ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಐಕ್ಯೂಎಸಿ, ರೆಡ್ ಕ್ರಾಸ್, ಎನ್‍ಸಿಸಿ, ಎನ್‍ಎಸ್‍ಎಸ್ ಘಟಕಗಳ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಪ್ರಥಮ ಚಿಕಿತ್ಸಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕವಾಗಿ ಮಾತನಾಡುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ದೂರದೃಷ್ಟಿಯ ಚಿಂತನೆ ಮತ್ತು ಸಕಾರಾತ್ಮಕವಾಗಿ ಯೋಚಿಸುವ ಜನರ ಜೊತೆ ಒಡನಾಡಬೇಕು. ಅಂತರ್ಜಾಲ ಮಾಹಿತಿಯಷ್ಟೇ ಜ್ಞಾನ ಅಲ್ಲ, ಪುಸ್ತಕಗಳನ್ನು ಓದುವ ಮೂಲಕ, ಅಧ್ಯಯನಶೀಲರಾಗಬೇಕು. ಅದರೊಂದಿಗೆ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಗೆಲುವಿನ ಸಂಭ್ರಮ ಸಣ್ಣದೇ ಇರಲಿ ಅಥವಾ ದೊಡ್ಡದೇ ಇರಲಿ ಅದನ್ನು ಆಚರಿಸಿ. ಮಾತ್ರವಲ್ಲ ನಮ್ಮ ತಪ್ಪಿನ ಬಗ್ಗೆ ತಿಳುವಳಿಕೆ ಹೊಂದುವ ಮೂಲಕ ಅದನ್ನು ಪರಿಹರಿಸಿಕೊಳ್ಳಬೇಕು. ಮತ್ತೆ ಆ ತಪ್ಪನ್ನು ಮಾಡದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ 19ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿ ಸಿಯ ಕಮಾಂಡಿಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ವಿ.ಡಿ.ಚಾಕೋ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವಂತೆ ಕರೆ ನೀಡಿದರು ಮತ್ತು ಪ್ರಥಮ ಚಿಕಿತ್ಸೆಯ ಮಹತ್ವ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೋ.ಬಿ.ರಾಘವ, ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಅಂಶಗಳನ್ನು ಕಲಿಸಿಕೊಡುತ್ತವೆ. ಪ್ರಥಮ ಚಿಕಿತ್ಸಾ ಕೌಶಲ್ಯವನ್ನು ಬಳಸಿಕೊಂಡು ಸಾಮಾಜಿಕ ಸೇವೆ ಸಲ್ಲಿಸಬೇಕು. ಸಮಾಜ ಸೇವೆಯಿಂದ ಮಾತ್ರ ವ್ಯಕ್ತಿ ನೆನಪಿನಲ್ಲಿ ಉಳಿಯಲು ಸಾಧ್ಯ ಎಂದರು.
ಮೈಸೂರು ಮಣಿಪಾಲ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಪ್ರದೀಪ್ ರಾಜಣ್ಣ ಪ್ರಾಯೋಗಿಕವಾಗಿ ಪ್ರಥಮ ಚಿಕಿತ್ಸಾ ವಿಧಾನದ ವಿವಿಧ ಆಯಾಮಗಳನ್ನು ಕಲಿಸಿಕೊಟ್ಟರು. ಅಪಘಾತ, ಹೃದಯಾಘಾತ, ಪ್ರಕೃತಿ ವಿಕೋಪ, ಪ್ರಾಣಿ, ಸರೀಸೃಪದಿಂದ ಉಂಟಾಗುವ ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಪ್ರಥಮ ಚಿಕಿತ್ಸಾ ಮಾದರಿಗಳ ಕುರಿತು ಉದಾಹರಣೆ ಸಹಿತ ಎರಡು ಹಂತದ ಪ್ರಾಯೋಗಿಕ ತರಗತಿಗಳನ್ನು ನೀಡಿದರು.
ಐಕ್ಯೂಎಸಿ ಸಂಯೋಜಕ ಡಾ. ಆರ್.ರಾಜೇಂದ್ರ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಅಲೋಕ್ ಬಿ.ಜೈ ಸ್ವಾಗತಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿ ವಿಸ್ಮಿತ ನಿರೂಪಿಸಿದರು. ಸ್ನೇಹ ಮತ್ತು ತಂಡ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ಕೆ.ಹೆಚ್. ಮುಸ್ತಾಫ ವಂದಿಸಿದರು. ಲೆಫ್ಟಿನೆಂಟ್ ಕರ್ನಲ್ ವಿ.ಡಿ.ಚಾಕೋ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು.