ಮಡಿಕೇರಿ ಮೇ 24 NEWS DESK : ಖಾಸಗಿ ಹಿಡುವಳಿ ಜಾಗದಲ್ಲಿ ಮೇ 1 ರಿಂದ ಸೆ.30 ರವರೆಗೆ ಮರಕಡಿತಲೆಗೆ ಅನುಮತಿ ನೀಡುವುದನ್ನು ತಡೆ ಹಿಡಿದಿರುವ ಅರಣ್ಯ ಇಲಾಖೆ ಕ್ರಮ ರೈತ ವಿರೋಧಿಯಾಗಿದೆ ಎಂದು ಕೊಡಗು ಜಿಲ್ಲಾ ಭೂಮಾಲೀಕರು ಮತ್ತು ಮರ ವ್ಯಾಪಾರಿಗಳ ಸಂಘ ಆರೋಪಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅರವಿಂದ್ ಕುಟ್ಟಪ್ಪ ಹಾಗೂ ಪದಾಧಿಕಾರಿಗಳು ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿವರ್ಷ ಮಳೆಗಾಲದ ಸಂದರ್ಭ ಜೂ.1 ರಿಂದ ಸೆ.30 ರವರೆಗೆ ಮರಕಡಿತಲೆಗೆ ಅನುಮತಿ ನಿರಾಕರಿಸಲಾಗುತ್ತಿತ್ತು. ಆದರೆ ಪ್ರಸ್ತುತ ವರ್ಷ ಒಂದು ತಿಂಗಳು ಮೊದಲೇ ಅನುಮತಿಯನ್ನು ಸ್ಥಗಿತಗೊಳಿಸಲಾಗಿದೆ. ಕಾಫಿ ತೋಟದಲ್ಲಿ ಅತೀ ಹೆಚ್ಚು ನೆರಳು ನೀಡುವ ಮರಗಳನ್ನು ಕಾಫಿ ಹಣ್ಣು ಬಲಿತ ಸಮಯವನ್ನು ಹೊರತು ಪಡಿಸಿ ಅರಣ್ಯ ಇಲಾಖೆಯ ಅನುಮತಿ ಪಡೆದು ಕಡಿಯಲು ಕೇವಲ 2- 3 ತಿಂಗಳು ಮಾತ್ರ ಅವಕಾಶವಿರುತ್ತದೆ. ಇದೀಗ ಒಂದು ತಿಂಗಳು ಮೊದಲೇ ಅನುಮತಿ ಸ್ಥಗಿತಗೊಳಿಸಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ವಿದ್ಯುತ್ ಲೈನ್ ಹಾದು ಹೋಗುವ ಸ್ಥಳದಲ್ಲಿರುವ ಮರಗಳು, ಕಾಡುಬೇವು, ಅಕೇಶಿಯಾ, ವಿಲಯಾಪ್ಪಿಸ್, ಮ್ಯಾಂಜಿಯA ಮತ್ತು ಸಿಲ್ವರ್ ಓಕ್ ಮರಗಳನ್ನು ವರ್ಷದ ಎಲ್ಲಾ ಸಮಯದಲ್ಲಿ ಕಡಿದು ಸಾಗಾಟ ಮಾಡುವುದಕ್ಕೆ ಯಾವುದೇ ನಿರ್ಭಂಧವಿಲ್ಲ. ಇದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲವೇ ಎಂದು ಅರವಿಂದ್ ಕುಟ್ಟಪ್ಪ ಪ್ರಶ್ನಿಸಿದ್ದಾರೆ.
ಸ್ವಂತ ಉಪಯೋಗಕ್ಕೆ ಮರ ಕಡಿಯಲು ಅನುಮತಿ ಕೋರಿ ಸಲ್ಲಿಕೆಯಾದ ಅರ್ಜಿಗಳು ವಿಲೇವಾರಿಯಾಗಲು ವಿಳಂಬವಾಗುತ್ತಿದೆ. 6 ತಿಂಗಳು ಕಳೆದರೂ ಅನುಮತಿ ಸಿಗುತ್ತಿಲ್ಲ, ಈ ಅವ್ಯವಸ್ಥೆಯನ್ನು ತಕ್ಷಣ ಸರಿ ಪಡಿಸಬೇಕು. ಮರಗಳ ಹರಾಜು ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ನಿಯಮಬದ್ಧವಾಗಿ ಮಾಡಬೇಕು. ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ನಡೆದಿರುವ ಮರಗಳ ಹನನದ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಬೇಕು. ಕಳೆದ ಹಲವು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲೇ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಖಾಸಗಿ ತೋಟಗಳಲ್ಲಿರುವ ಮರಗಳನ್ನು ಸರ್ವೆ ಮಾಡುತ್ತಿರುವ ಅರಣ್ಯ ಇಲಾಖೆಯ ಕ್ರಮವನ್ನು ವಿರೋಧಿಸುವುದಾಗಿ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎ.ಮನೋರಂಜನ್, ಉಪಾಧ್ಯಕ್ಷ ಕೆ.ಎ.ಆದಂ, ಕಾನೂನು ಸಲಹೆಗಾರ ಸಿ.ಬಿ.ಪೂವಣ್ಣ ಹಾಗೂ ನಿರ್ದೇಶಕ ಎಂ.ರಾಜೀವ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.