ಮಡಿಕೇರಿ ಮೇ 25 NEWS DESK : ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಮೇ 30 ರೊಳಗೆ ಪ್ರದರ್ಶಿಸಬೇಕೆಂದು ನೀಡಿರುವ ಗಡುವನ್ನು ಡಿ.31 ರವರೆಗೆ ವಿಸ್ತರಿಸಬೇಕೆಂದು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಜಿಲ್ಲಾಡಳಿತದ ಬಳಿ ಮನವಿ ಮಾಡಿದೆ.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರು ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮಳೆ ಪ್ರಾರಂಭವಾಗಿದ್ದು, ನಾಮಫಲಕವನ್ನು ಬದಲಾಯಿಸಲು ಅಡಚಣೆಯಾಗಿದೆ. ಅಲ್ಲದೆ ಆರ್ಥಿಕ ಪರಿಸ್ಥಿತಿಯೂ ಹಿನ್ನಡೆಯನ್ನುಂಟು ಮಾಡುತ್ತಿದೆ ಎಂದರು.
ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿರುವಂತೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕದಲ್ಲಿ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ, ವ್ಯವಹಾರ ಉದ್ಯಮಗಳು, ಟ್ರಸ್ಟ್‍ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‍ಗಳು ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸಬೇಕೆಂದು ಸರಕಾರದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಹಾಸಭೆಗೆ ಆಗಮಿಸಿದ್ದ ನಗರಸಭೆಯ ಅಧಿಕಾರಿಗಳು ಮಾಹಿತಿ ಮತ್ತು ಅಧಿಸೂಚನೆಯ ಪ್ರತಿಯನ್ನು ನೀಡಿ ಮೇ 30 ರೊಳಗೆ ಶೇ.60 ರಷ್ಟು ಕನ್ನಡ ಭಾಷೆ ಇರುವ ನಾಮಫಲಕ ಅಳವಡಿಸುವಂತೆ ಸೂಚಿಸಿದ್ದಾರೆ. ಆದರೆ ಕೊಡಗಿನ ವಾತಾವರಣ ಮತ್ತು ವ್ಯಾಪಾರಿಗಳ ಆರ್ಥಿಕ ಪರಿಸ್ಥಿತಿ ಇದಕ್ಕೆ ಪೂರಕವಾಗಿಲ್ಲ. ಕೆಲವು ವಾಣಿಜ್ಯೋದ್ಯಮಿಗಳು ಇತ್ತೀಚೆಗಷ್ಟೇ ಸಾವಿರಾರು ರೂಪಾಯಿ ಖರ್ಚು ಮಾಡಿ ನಾಮಫಲಕಗಳನ್ನು ಅಳವಡಿಸಿದ್ದಾರೆ. ಸಧ್ಯದ ಪರಿಸ್ಥಿತಿಯಲ್ಲಿ ಮತ್ತೆ ನಾಮಫಲಕದ ಬದಲಾವಣೆ ಕಷ್ಟವಾಗಲಿದೆ.
ಆದ್ದರಿಂದ ವರ್ತಕರ ಹಾಗೂ ವಾಣಿಜ್ಯೋದ್ಯಮಿಗಳ ಹಿತದೃಷ್ಟಿಯಿಂದ ಡಿ.31 ರವರೆಗೆ ಗಡುವು ವಿಸ್ತರಿಸಿ ಸಹಕರಿಸಬೇಕೆಂದು ಬಿ.ಆರ್.ನಾಗೇಂದ್ರ ಪ್ರಸಾದ್ ಮನವಿ ಮಾಡಿದರು. ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಬಳಸುವುದಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ಸ್ಪಷ್ಟಪಡಿಸಿದರು.