ಮಡಿಕೇರಿ ಜೂ.5 NEWS DESK : ಅಂಗಡಿಯ ಬೀಗ ಮುರಿದು ನಗದು, ಚಿನ್ನಾಭರಣ ಮತ್ತು ಅಂಗಡಿ ಎದುರು ನಿಲ್ಲಿಸಿದ್ದ ಸ್ಕೂಟಿ ಸಹಿತ ಇತರ ವಸ್ತುಗಳನ್ನು ಕಳ್ಳತನ ಮಾಡಿರುವ ಪ್ರಕರಣ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಾಳತ್ತಮನೆಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಭರತ್ ಎಂಬುವವರ ಅಂಗಡಿಗೆ ಮಂಗಳವಾರ ರಾತ್ರಿ ನುಗ್ಗಿದ ಕಳ್ಳರು ನಗದು ಸಹಿತ ಅಮೂಲ್ಯ ವಸ್ತುಗಳಿಗೆ ಹುಡುಕಾಟ ನಡೆಸಿ ಕೈಗೆ ಸಿಕ್ಕಿದ್ದನ್ನು ದೋಚಿದ್ದಾರೆ.
ಎಂದಿನಂತೆ ಬುಧವಾರ ಬೆಳಗ್ಗೆ ಅಂಗಡಿಗೆ ಆಗಮಿಸಿದ ಮಾಲೀಕರಿಗೆ ಸ್ಕೂಟಿ ನಾಪತ್ತೆಯಾಗಿರುವುದು ಗೋಚರಿಸಿದೆ. ನಂತರ ಪರಿಶೀಲಿಸಿದಾಗ ಬೀಗ ಮುರಿದು ಅಂಗಡಿಗೆ ನುಗ್ಗಿದ ಕಳ್ಳರು ಕಳ್ಳತನ ಮಾಡಿರುವುದು ಕಂಡು ಬಂದಿದೆ. ಸ್ಕೂಟಿ, 10 ಸಾವಿರ ನಗದು ಮತ್ತು 40 ಗ್ರಾಂ ಚಿನ್ನಾಭರಣ ಕಳುವಾಗಿರುವ ಕುರಿತು ಅಂಗಡಿ ಮಾಲೀಕ ಭರತ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಠಾಣಾಧಿಕಾರಿ ಶ್ರೀನಿವಾಸಲು, ಕ್ರೈಂ ಹಾಗೂ ಗ್ರಾಮಾಂತರ ಠಾಣಾ ಗುಪ್ತ ದಳದ ಸಿಬ್ಬಂದಿಗಳು ಭೇಟಿ ನೀಡಿದರು. ಶ್ವಾನ ದಳ, ಬೆರಳಚ್ಚು ಘಟಕ ಹಾಗೂ ವೈಜ್ಞಾನಿಕ ನೆರವು ಘಟಕದ ಸಿಬ್ಬಂದಿಗಳು ಕಳ್ಳರ ಜಾಡು ಪತ್ತೆಗಾಗಿ ಶೋಧ ಕಾರ್ಯ ನಡೆಸಿದರು.